Advertisement

ಅಂತಿಮ ಹಂತದಲ್ಲಿ ‘ಬ್ಲೂ ಫ್ಲ್ಯಾಗ್‌ ಬೀಚ್‌’ಕಾಮಗಾರಿ

02:24 AM Jul 12, 2020 | Hari Prasad |

ಪಡುಬಿದ್ರಿ: ಕಾಮಿನಿ ನದಿಯು ಸಮುದ್ರ ಸೇರುವ ಪಡುಬಿದ್ರಿ ಎಂಡ್‌ ಪಾಯಿಂಟ್‌ ಬಳಿ ಬ್ಲೂ ಫ್ಲ್ಯಾಗ್‌ ಬೀಚ್‌ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ.

Advertisement

ಜು. 15ರೊಳಗೆ ಕೇಂದ್ರ ಪರಿಸರ ಇಲಾಖೆಯ ನಿರ್ಣಾಯಕರ ಮಂಡಳಿಯಿಂದ (ಜ್ಯೂರಿ) ಅಂತಿಮ ಪರಿಶೀಲನೆ ನಡೆಯಲಿದೆ. ಮುಂದೆ ಡೆನ್ಮಾರ್ಕ್‌ನ ಅಂತಾರಾಷ್ಟ್ರೀಯ ನಿರ್ಣಾಯಕರ ಮಂಡಳಿಯು ಪರಿಶೀಲಿಸಿ ಬ್ಲೂ ಫ್ಲ್ಯಾಗ್‌ ಬೀಚ್‌ ಪ್ರಮಾಣ ಪತ್ರವನ್ನು ಭಾರತ ಸರಕಾರಕ್ಕೆ ನೀಡಲಿದೆ.

ಕೇಂದ್ರ ಸರಕಾರದ ಅನುಮೋದನೆಯಂತೆ ರಾಜ್ಯದ ಕಾರವಾರ ಹಾಗೂ ಪಡುಬಿದ್ರಿ ಕಡಲ ತೀರಗಳನ್ನು ಬ್ಲೂ ಫ್ಲ್ಯಾಗ್‌ ಬೀಚ್‌ ಯೋಜನೆಗೆ ಆಯ್ಕೆ ಮಾಡಿದ್ದು, ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪರಿಸರ ಇಲಾಖೆಯ ಗುರ್ಗಾಂವ್‌ನ ಎ ಟು ಝಡ್‌ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿತ್ತು.

ರಾಜ್ಯದ 2.5 ಕೊ.ರೂ.
ರಾಜ್ಯ ಸರಕಾರವು 2.5 ಕೋಟಿ ರೂ. ವ್ಯಯಿಸಿ ಇಲ್ಲಿ ಮೂಲ ಸೌಕರ್ಯ ಕಾಮಗಾರಿ ನಡೆಸಿದೆ. ತಾತ್ಕಾಲಿಕ ಶೌಚಗೃಹ, ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ನೀರು ಶುದ್ಧೀಕರಣ ಘಟಕ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕೆಮರಾ ಹಾಗೂ ನಿಯಂತ್ರಣ ಕೊಠಡಿ, ಮಕ್ಕಳ ಆಟಿಕೆ ಸಾಮಗ್ರಿಗಳು, ಪ್ರಥಮ ಚಿಕಿತ್ಸಾ ಕೊಠಡಿ, ಘನತ್ಯಾಜ್ಯ ಸಂಸ್ಕರಣೆ ಘಟಕ ಹಾಗೂ ಸೋಲಾರ್‌ ದೀಪಗಳನ್ನು ಅಳವಡಿಸಲಾಗಿದೆ. ಕಾಲು ದಾರಿಗಳು, ವಾಹನ ನಿಲುಗಡೆ ಸ್ಥಳಕ್ಕೆ ಇಂಟರ್‌ಲಾಕ್‌, ಹಸಿರು ಹುಲ್ಲು ಹಾಸುವಿಕೆ ಹಾಗೂ ಮಾಹಿತಿ ಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನೀರಿನ ಸಂಪರ್ಕ ಹಾಗೂ ಬಿದಿರಿನ ಆಸನಗಳನ್ನು ಅಳವಡಿಸುವ ಕಾರ್ಯ ಬಾಕಿಯಿದೆ.

ಕುದ್ರು ಅಭಿವೃದ್ಧಿಗೆ ಪ್ರಸ್ತಾವನೆ
ಯೋಜನಾ ಪ್ರದೇಶಕ್ಕೆ ಹೊಂದಿಕೊಂಡಿರುವ ಕುದ್ರು ಪ್ರದೇಶದ ಅಭಿವೃದ್ಧಿಗೂ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಬ್ಲೂ ಫ್ಲ್ಯಾಗ್‌ ಬೀಚ್‌ ಕೆಲಸ ಅಂತಿಮಗೊಂಡ ಬಳಿಕ ಇದನ್ನು ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಚಂದ್ರಶೇಖರ್‌ ನಾಯಕ್‌ ತಿಳಿಸಿದ್ದಾರೆ.

Advertisement

ಏನಿದು ಬ್ಲೂ ಫ್ಲ್ಯಾಗ್‌ ಪ್ರಮಾಣ ಪತ್ರ
ಫೌಂಡೇಶನ್‌ ಫಾರ್‌ ಎನ್ವಿರಾನ್‌ಮೆಂಟಲ್‌ ಎಜುಕೇಶನ್‌ ಎಂಬ ಸಂಸ್ಥೆಯು ಸ್ವಚ್ಛತೆ ಮತ್ತು  ಪ್ರವಾಸಿ ಸ್ನೇಹಿ ಕಡಲ ತೀರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಲೂ ಫ್ಲ್ಯಾಗ್‌ ಪ್ರಮಾಣ ಪತ್ರ ನೀಡುತ್ತದೆ. ಈ ಸಂಸ್ಥೆ ವಿಶ್ವದ 60 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ.

ಈವರೆಗೆ ಜಪಾನ್‌ನ 2 ತೀರಗಳಿಗೆ ಮಾತ್ರ ಈ ಪ್ರಮಾಣ ಪತ್ರ ನೀಡಿದೆ. ಪ್ರಮಾಣ ಪತ್ರ ಲಭಿಸಿದಲ್ಲಿ ಕಡಲ ತೀರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಯೋಜನೆಯಲ್ಲಿ ಈಗಾಗಲೇ 50 ಮಂದಿ ಸ್ಥಳೀಯರು ಉದ್ಯೋಗ ಪಡೆದಿದ್ದು, ಮುಂದೆ ಹೋಂ ಸ್ಟೇ, ವ್ಯಾಪಾರ ವಹಿವಾಟುಗಳ ಮೂಲಕ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next