ದೇವತೆಗಳ ಚಿತ್ರ ಈಗ ದೇವರ ಕೋಣೆಗಳಿಗಷ್ಟೇ ಸೀಮಿತವಾಗಿಲ್ಲ. ಉಡುಪುಗಳ ಮೇಲೂ ಅಚ್ಚಾಗುತ್ತಿದೆ. “ಫುಲ್‌ಬಾಕ್’ ರವಿಕೆಗಳಲ್ಲಿನ ದೇವರ ಚಿತ್ರಗಳು ಈಗ ಆಕರ್ಷಣೆಯ ಕೇಂದ್ರಬಿಂದು. ದಸರಾ ವೇಳೆಯಲ್ಲಿ ಎಲ್ಲೆಲ್ಲೂ ಕಾಣುವ ಈ ರವಿಕೆಯ ಟ್ರೆಂಡ್ ಬಗ್ಗೆ ಇಲ್ಲೊಂದಿಷ್ಟು ಕಣ್ಣರಳಿಸುವ ಸಂಗತಿ…
ವಸ್ತ್ರ ವಿನ್ಯಾಸಕರೊಬ್ಬರು ಹಬ್ಬದ ಮಾಸ ಶುರುವಾಗುತ್ತಿರುವಂತೆ ಹೊಸ ವಿನ್ಯಾಸದ ರವಿಕೆಯನ್ನು ಮಾರುಕಟ್ಟೆಗೆ ಪರಿಚಯಿಸಿದರು. ಅವುಗಳನ್ನು ಸೀರೆಯ ಜೊತೆ ತೊಟ್ಟು ಮಹಿಳೆಯರು ಪೋಸ್ ಕೊಟ್ಟಿದ್ದೇ ತಡ, ಈ ಹೊಸ ವಿನ್ಯಾಸದ ರವಿಕೆಗಳ ಚಿತ್ರಗಳು ವಾಟ್ಸಾಪ್, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡತೊಡಗಿದವು! ಇದರ ಕ್ರೇಜ್ ಅದೆಷ್ಟು ಹೆಚ್ಚಾಯಿತು ಎಂದರೆ, ಯುವತಿಯರು ಟೈಲರ್ ಬಳಿ ಈ ಚಿತ್ರಗಳನ್ನು ತೋರಿಸಿ, ನಮಗೂ ಇಂಥದ್ದೇ ವಿನ್ಯಾಸದ ರವಿಕೆ ಬೇಕು ಎಂಬ ಬೇಡಿಕೆ ಇಡಲು ಶುರು ಮಾಡಿದರು. ಈ ವಿನ್ಯಾಸದಲ್ಲಿ ಅಂಥದ್ದೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ಬ್ಯಾಕ್‌ಲೆಸ್ ಬ್ಲೌಸ್‌ಗಳು ಬೋರಿಂಗ್ ಆದವು. ಇದೀಗ ಏನಿದ್ದರೂ ಫುಲ…ಬ್ಯಾಕ್ ಇರುವ ರವಿಕೆಗಳಲ್ಲಿ ದೇವಾನು, ದೇವತೆಯರ ಚಿತ್ರಗಳು ಮೂಡುವ ಕಾಲ!
ಈ ವಿನ್ಯಾಸಕ್ಕೆ ಸಿನಿಮಾ ನಟಿಯರೂ ಮಾರು ಹೋಗಿ¨ªಾರೆ! ತಿರುಪತಿ ಬಾಲಾಜಿ, ನವನೀತ ಚೋರ ಬಾಲಕೃಷ್ಣ, ಸರಸ್ವತಿ, ರಾಧಾಕೃಷ್ಣ ಹಾಗು ಗಣಪತಿಯ ಚಿತ್ರಗಳುಳ್ಳ ರವಿಕೆ ತೊಟ್ಟು ಸಭೆ- ಸಮಾರಂಭಗಳಿಗೆ ನಟಿಯರು ಹೋಗುತ್ತಿ¨ªಾರೆ. ಈ ವಿನ್ಯಾಸ ಕೇವಲ ಬೆನ್ನಿಗೆ ಸೀಮಿತವಾಗದೇ, ತೋಳುಗಳಲ್ಲೂ ಕಾಣಿಸಿಕೊಂಡಿದೆ! ತಮಿಳರು ಪೂಜಿಸುವ ದೇವಿ ಆಂಡಾಲ… ಅವರ ಚಿತ್ರವನ್ನು ರವಿಕೆಯ ತೋಳಿನ ಮೇಲೆ ಮೂಡಿಸಲಾಗುತ್ತದೆ. ಮದುಮಗಳು ಇಂಥ ರವಿಕೆಗಳನ್ನು ಉಟ್ಟು ತನ್ನ ಉಡುಗೆಗೆ ಮೆರಗು ನೀಡುತ್ತಾಳೆ. ದೇವಸ್ಥಾನದ ಗೋಪುರ, ರಥ, ದ್ವಾರಪಾಲಕರಾದ ಜಯ ವಿಜಯ, ಬೆಳ್ಳಿ ದೀಪಗಳ ಚಿತ್ರ, ಇವೆಲ್ಲವನ್ನೂ ತೋಳಿನಲ್ಲಿ ಬಿಡಿಸಲಾಗುತ್ತದೆ.
ಇದೀಗ ನವರಾತ್ರಿ ಸಮಯದಲ್ಲಿ ನವ ದೇವಿಗಳ ಚಿತ್ರಗಳಿರುವ ರವಿಕೆಗಳಿಗೆ ಬಹು ಬೇಡಿಕೆ ಇದೆ! ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕುಶ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿಧಾತ್ರಿಯ ಚಿತ್ರಗಳನ್ನು ಕಸೂತಿ ಅಥವಾ ಪೇಂಟ್ (ಚಿತ್ರಕಲೆ) ಮೂಲಕ ರವಿಕೆಯ ಮೇಲೆ ಮೂಡಿಸಲಾಗುತ್ತದೆ.
ಹೆಚ್ಚಾಗಿ ಈ ರವಿಕೆಗಳನ್ನು ರೇಷ್ಮೆ, ಖಾದಿ ಅಥವಾ ಹತ್ತಿ ಬಟ್ಟೆಯಿಂದ ತಯಾರು ಮಾಡಲಾಗುತ್ತದೆ. ಇವುಗಳನ್ನು ಪೂಜೆ, ಮದುವೆ, ಹಬ್ಬ- ಹರಿದಿನಗಳಲ್ಲಿ ಉಪ್ಪಾಡ ಪಟ್ಟು ರೇಷ್ಮೆ ಸೀರೆ, ಪೈಠಣಿ ಸೀರೆ, ಕಾಂಜೀವರಂ ಮತ್ತು ಬನಾರಸ್ ಸೀರೆಗಳು ಅಥವಾ ಖಾದಿ ಸೀರೆಗಳ ಜೊತೆ ತೋಡಲಾಗುತ್ತದೆ. ಇವುಗಳ ಜೊತೆ ಕೆನ್ನೆ ಸರಪಳಿ, ಮಾಟಿ, ಬೈತಲೆ ಬಟ್ಟು, ಡಾಬು, ಅರವಂಕಿ, ಮೂಗುತಿಯಂಥ ಸಾಂಪ್ರದಾಯಿಕ ಒಡವೆ ತೊಟ್ಟರೆ ಚೆಂದ. ಇವುಗಳ ಜೊತೆ ಮಾಡರ್ನ್ ಅಥವಾ ಫ್ಯಾನ್ಸಿ ಆಭರಣಗಳು ಚೆನ್ನಾಗಿ ಕಾಣಿಸುವುದಿಲ್ಲ. ಟೆಂಪಲ… ಜುವೆಲರಿ, ಕುಂದನ್, ಮುತ್ತು, ಹವಳ, ಅಮೂಲ್ಯ ರತ್ನ ಅಥವಾ ಬರೀ ಚಿನ್ನದ ಆಭರಣಗಳನ್ನು ತೊಡಬಹುದು.
ಇನ್ನು ಈ ರವಿಕೆ ತೊಟ್ಟಾಗಲೆಲ್ಲ ಜಡೆ, ಜುಟ್ಟು ಹಾಕುವಂತಿಲ್ಲ. ಒಂದು ವೇಳೆ ಹಾಕಿದರೂ ಜಡೆಯನ್ನು ಮುಂದುಗಡೆ ಹಾಕಿಕೊಳ್ಳಬೇಕು. ಇಲ್ಲವಾದರೆ, ಬೆನ್ನ ಮೇಲಿನ ಚಿತ್ರ ಕಾಣಿಸುವುದು ಹೇಗೆ? ಆದ್ದರಿಂದ ಈ ರವಿಕೆಯ ಜೊತೆ ಸೂಡಿ, ಬನ್ (ತುರುಬು) ನಂಥ ಕೇಶಾಲಂಕಾರ ಅಂದ. ಜೊತೆಗೆ ಹಣೆಗೆ ಬೊಟ್ಟು ಮತ್ತು ತುರುಬಿನ ಸುತ್ತ ಮಲ್ಲಿಗೆ ಹೂವಿನ ಮಾಲೆ ತೊಟ್ಟರೆ ಅಂದವೋ ಅಂದ!
ನವರಾತ್ರಿ ವೇಳೆ ಡಾಂಡಿಯಾ (ಕೋಲಾಟ), ಗರ್ಬಾದಂಥಾ ನೃತ್ಯಗಳು ಗುಜರಾತಿನಲ್ಲಿ ಪ್ರಸಿದ್ಧ. ಆಗ ದಿನಕ್ಕೆ ಒಂದರಂತೆ ಒಬ್ಬೊಬ್ಬ ದೇವಿಯ ಚಿತ್ರವುಳ್ಳ ರವಿಕೆಯನ್ನು ತೊಡಬಹುದು. ಮೊದಲ ದಿನ ಶೈಲಪುತ್ರಿಯ ಚಿತ್ರವುಳ್ಳ ರವಿಕೆ, ಎರಡನೇ ದಿನ ಬ್ರಹ್ಮಚಾರಿಣಿಯ ಚಿತ್ರವುಳ್ಳ ರವಿಕೆ, ಹೀಗೆ ನವರಾತ್ರಿಗೆ ಒಂಭತ್ತು ರವಿಕೆಗಳು! ಇನ್ನು ಯಾಕೆ ತಡ? ನೀವು ನಿಮ್ಮ ಇಷ್ಟ ದೈವದ ಚಿತ್ರವನ್ನು ನಿಮ್ಮ ರವಿಕೆಯಲ್ಲಿ ಮೂಡಿಸಲು ಸಜ್ಜಾಗಿ! ಹಬ್ಬ ಜೋರಾಗಿರಲಿ!
ಅದಿತಿಮಾನಸ ಟಿ. ಎಸ್.