Advertisement
ಕೋಡಿಬೆಂಗ್ರೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಜಯದಶಮಿಯಂದು ದೇವಿಯ ಉತ್ಸವ ಮೂರ್ತಿ ಮತ್ತು ಪಂಜುರ್ಲಿ ದೈವದ ಮುಖ ಮೆರವಣಿಗೆಯು ಎರಡು ಗ್ರಾಮದ ಪ್ರಮುಖ ಬೀದಿಯಲ್ಲಿ (ಸುಮಾರು 5 ಕಿ.ಮೀ. ದೂರ) ಸಾಗುತ್ತದೆ. ಈ ಮೆರವಣಿಗೆಯಲ್ಲಿ ಎರಡು ಗ್ರಾಮದ ಕೂಡುಕಟ್ಟಿನ 220 ಮನೆಗಳು ಸೇರಿದಂತೆ ಆಸುಪಾಸಿನ ಗ್ರಾಮದ ಒಟ್ಟು 500 ಕುಟುಂಬಗಳು ಪಾಲ್ಗೊಳ್ಳುವುದು ವಿಶೇಷವಾಗಿದೆ.
ವಿಜಯ ದಶಮಿಯಂದು ಸಂಜೆ 5 ಗಂಟೆಗೆ ದೇವಸ್ಥಾನದಲ್ಲಿ ಪೂಜೆ, ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಹೂವಿನಿಂದ ಅಲಂಕರಿಸಿದ ಪಲ್ಲಕಿಯಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ಹೊತ್ತು ತರಲಾಗುತ್ತದೆ. ಮತ್ತೂಬ್ಬರು ಪಂಜುರ್ಲಿ ದೈವದ ಮುಖವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾರೆ. ಈ ಮೆರವಣಿಗೆಯು ಕೋಡಿಬೆಂಗ್ರೆ ಮತ್ತು ಪಡುತೋನ್ಸೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ. ವಿವಿಧ ವೇಷಭೂಷಣ, ವಾದ್ಯಘೋಷಗಳು, ಸ್ತಬ್ದಚಿತ್ರ, ಕಲಶ ಹೊತ್ತ ಮಹಿಳೆಯರು ಇರುತ್ತಾರೆ. ದಾರಿಯುದ್ದಕ್ಕೂ ಸಿಗುವ ದೇವಸ್ಥಾನ, ಭಜನಾ ಮಂದಿರ, ನಾಗ ದೇವರ ಗುಡಿ, ದೈವಸ್ಥಾನಗಳ ಎದುರು ಹಣ್ಣುಕಾಯಿ ಸೇವೆಯನ್ನು ನೀಡಲು ಅವಕಾಶ ನೀಡಲಾಗುತ್ತದೆ. ಅಲ್ಲಿಂದ ಹಿಂದಿರುಗಿದ ಬಳಿಕ ದೇವಸ್ಥಾನದಲ್ಲಿ ರಂಗಪೂಜೆ, ಪ್ರಸನ್ನಪೂಜೆ ನಡೆಸಲಾಗುತ್ತದೆ. ಮೆರವಣಿಗೆ ಸಾಗುವಾಗ ಈ ಹಿಂದೆ ಬೈಹುಲ್ಲಿನ ಮಾಡು ಇದ್ದ ದೇವಸ್ಥಾನ ಹೆಂಚಿನ ಕಟ್ಟಡಕ್ಕೆ ಪರಿವರ್ತನೆಗೊಂಡಂದಿನಿಂದ ಅಂದರೆ 1990ರಿಂದ ನವರಾತ್ರಿ ಒಂಬತ್ತು ದಿವಸದ ಬಳಿಕ ವಿಜಯೋತ್ಸವ ಆರಂಭಿಸಲಾಗಿದೆ. ಪಲ್ಲಕಿ ಉತ್ಸವ ಅಪರೂಪ
ಉತ್ಸವದಲ್ಲಿ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ಮತ್ತು ಸ್ವಲ್ಪ ದೂರ ಒಯ್ಯುವುದು ಸಾಮಾನ್ಯ. ಇಲ್ಲಿ ಎರಡು ಗ್ರಾಮದ ಬೀದಿ ಬೀದಿಗಳನ್ನು ಸುತ್ತಿ ಪಲ್ಲಕಿ ಉತ್ಸವ ನಡೆಸುವುದು ಬಹಳ ಅಪರೂಪವಾಗಿದೆ. ಈ ಉತ್ಸವದಲ್ಲಿ ಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಿದ್ದಾರೆ.
– ಕರುಣಾಕರ ಜಿ. ಅಮೀನ್, ಅರ್ಚಕರು, ಕೋಡಿಬೆಂಗ್ರೆ, ದುರ್ಗಾಪರಮೇಶ್ವರೀ ದೇಗುಲ
Related Articles
ಕೋಡಿಬೆಂಗ್ರೆಯು ಸಮುದ್ರದ ಭೋರ್ಗರೆಯುವ ಅಬ್ಬರದ ಅಲೆಗಳ ನಡುವೆಯೂ ಗಟ್ಟಿಯಾಗಿ ನಿಂತಿರುವುದು ಇಲ್ಲಿನ ದೈವ-ದೇವರ ಶಕ್ತಿಯ ಕಾರಣಕ್ಕಾಗಿ ಎಂದು ಜನರು ನಂಬಿದ್ದಾರೆ. ದುರ್ಗಾ ಪರಮೇಶ್ವರಿ ಗ್ರಾಮದೇವತೆಯಾಗಿ ಮತ್ತು ಪಂಜುರ್ಲಿ ದೈವವು ಮಹಾಶಕ್ತಿಯಾಗಿ ಇಲ್ಲಿ ಪೂಜಿಸಲ್ಪಡುತ್ತಿದ್ದಾರೆ. ಹರಕೆ ಹೊತ್ತ ಭಕ್ತರ ಮನದಿಂಗಿತ ಕಾರ್ಯಗಳು ಸಾಂಗವಾಗಿ ನೆರವೇರುತ್ತದೆ ಎಂಬ ಭರವಸೆ ಇದ್ದು, ಹೀಗಾಗಿಯೇ ದೇವಿಯ ದಂಡಿಗೋತ್ಸವಕ್ಕೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
Advertisement