Advertisement
ರಕ್ತ ಮತ್ತು ರಕ್ತದ ಘಟಕಗಳ ವರ್ಗಾವಣೆಯ ಮೂಲಕ ಕೋವಿಡ್- 19 ವೈರಸ್ ಹರಡುವಿಕೆಯ ಅಪಾಯವನ್ನು ತಗ್ಗಿಸುವುದು ಕೋವಿಡ್ -19 ವೈರಸ್ ಮುಖ್ಯವಾಗಿ ಉಸಿರಾಟದ ಮಾರ್ಗದಿಂದ ಹರಡುತ್ತದೆ. ಉಸಿರಾಟದ ತೊಂದರೆ ಉಂಟುಮಾಡುವ ವೈರಸ್‌ಗಳು (Repiratory viruses) ರಕ್ತ ಅಥವಾ ರಕ್ತದ ಅಂಶಗಳ ಮೂಲಕ ಹರಡುವುದು ವರದಿಯಾಗಿಲ್ಲ. ಆದ್ದರಿಂದ ಲಕ್ಷಣರಹಿತ ವ್ಯಕ್ತಿಗಳಿಂದ ಸಂಗ್ರಹಿಸಿದ ರಕ್ತವನ್ನು ವರ್ಗಾವಣೆ ಮಾಡುವುದರಿಂದ ರೋಗ ಹರಡುವ ಯಾವುದೇ ಅಪಾಯವು ಕಡಿಮೆ ಮತ್ತು ಇದು ಸೈದ್ಧಾಂತಿಕ ಅಪಾಯ ಮಾತ್ರವಾಗಿದೆ (Theoretical risk). ಆದರೂ ಅಪಾಯವನ್ನು ತಗ್ಗಿಸಲು ರಕ್ತ ನಿಧಿಗಳಲ್ಲಿ ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಪ್ರಸ್ತುತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ ರಕ್ತದ ಘಟಕಗಳನ್ನು ಕೋವಿಡ್-19ಗಾಗಿ ಪರೀಕ್ಷಿಸಲಾಗುವುದಿಲ್ಲ.
Related Articles
Advertisement
ಸಾಮಾಜಿಕ ಅಂತರ: ರಕ್ತದಾನ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರ ಕ್ರಮಗಳನ್ನು ಅನುಸರಿಸಲಾಗುತ್ತದೆ. ಉದಾಹರಣೆಗೆ, ಕಾಯುವ ಸ್ಥಳ, ರಕ್ತದಾನ ಕೊಠಡಿ ಮತ್ತು ರಿಫ್ರೆಶ್‌ಮೆಂಟ್ ಕೊಠಡಿಯಲ್ಲಿ ವ್ಯಕ್ತಿಗಳ ನಡುವೆ ಒಂದು ಮೀಟರ್ ದೂರ ಕಾಯ್ದುಕೊಳ್ಳಲಾಗುತ್ತದೆ.
ಕೈಗಳ ನೈರ್ಮಲ್ಯ ಕಾಪಾಡುವಿಕೆ: ಸ್ಯಾನಿಟೈಸರ್‌ಗಳನ್ನು ಬಳಸಿಕೊಂಡು ಸಿಬಂದಿ ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸುವರು. ರಕ್ತದಾನಿಗಳಿಗೆ ರಕ್ತ ನಿಧಿಗೆ ಪ್ರವೇಶಿಸುವ ಮೊದಲು ಮತ್ತು ನಿರ್ಗಮಿಸುವ ಮುನ್ನ ತಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಸೂಚಿಸಲಾಗುತ್ತದೆ.
ಮಾಸ್ಕ್ ಧಾರಣೆ: ಸುರಕ್ಷೆಯ ಉದ್ದೇಶಕ್ಕಾಗಿ ಮಾಸ್ಕ್ ಧರಿಸುವುದು ಎಲ್ಲರಿಗೂ ಕಡ್ಡಾಯ ಮಾಡಲಾಗಿದೆ.
ಗ್ಲವ್ಸ್ ಧಾರಣೆ: ಎಲ್ಲ ಸಿಬಂದಿ ಗ್ಲವ್ಸ್ ಬಳಸುತ್ತಾರೆ ಮತ್ತು ರಕ್ತವನ್ನು ಸಂಗ್ರಹಿಸುವಾಗ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗುವುದು.
ಶುಚಿತ್ವ ಪಾಲನೆ: ರಕ್ತದಾನದ ಕುರ್ಚಿಯನ್ನು ಪ್ರತಿಯೊಬ್ಬ ದಾನಿಯು ತೆರವುಗೊಳಿಸಿದ ಅನಂತರ ಶುಚಿಗೊಳಿಸಲಾಗುವುದು.
-ರಕ್ತದಾನ ಮಾಡುವ ಕುರ್ಚಿಗೆ ಹೊಸದಾದ ಹಾಳೆಗಳನ್ನು ಹಾಕಿ ಅದನ್ನು ಪ್ರತೀ ಸಲ ಬದಲಿಸಲಾಗುತ್ತದೆ.– ಸೋಂಕು ನಿವಾರಕಗಳನ್ನು ಬಳಸಿ ಎಲ್ಲ ಉಪಕರಣಗಳನ್ನು ಶುಚಿಗೊಳಿಸಲಾಗುವುದು. ಈ ಸಂದರ್ಭದಲ್ಲಿ ರಕ್ತದಾನ ಮಾಡುವುದು ಸುರಕ್ಷಿತವೇ?
ಈ ಮೇಲೆ ಹೇಳಿದ ಎಲ್ಲ ಮುಂಜಾಗ್ರತೆಯನ್ನು ರಕ್ತದಾನ ಮಾಡುವ ಸ್ಥಳಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ರಕ್ತನಿಧಿಯು ಆಸ್ಪತ್ರೆಯಲ್ಲಿ ಒಂದು ಸುರಕ್ಷಿತವಾದ ಜಾಗದಲ್ಲಿ ಇರುವುದಲ್ಲದೆ, ಇಲ್ಲಿ ದಾನಿಯ ಆರೋಗ್ಯ ಕಾಪಾಡುವುದಕ್ಕೆ ಪ್ರಾಮುಖ್ಯ ನೀಡಲಾಗುತ್ತದೆ. ಎಲ್ಲರಿಗೂ ಸುರಕ್ಷಿತ ರಕ್ತದ ಪೂರೈಕೆಯ ಸಾಧ್ಯತೆ ನಿಜವಾಗಿಸಲು ನಮ್ಮೊಂದಿಗೆ ಸೇರಲು ನಾವು ನಿಮ್ಮನ್ನು ಕೋರುತ್ತೇವೆ. ಆರೋಗ್ಯವಂತ ದಾನಿಗಳ ಆಯ್ಕೆ
ಸೋಂಕುಪೀಡಿತ ಜನರಲ್ಲಿ ಅನೇಕರು ಲಕ್ಷಣರಹಿತರಾಗಿರುವುದರಿಂದ ಆರೋಗ್ಯಕರ ರಕ್ತದಾನಿಗಳನ್ನು ಗುರುತಿಸುವುದು ದೊಡ್ಡ ಸವಾಲಾಗಿದೆ. ರಕ್ತ ನಿಧಿಯಲ್ಲಿ ಕೋವಿಡ್ -19 ಸೋಂಕಿನ ಪರೀಕ್ಷೆ ಮಾಡಲಾಗುವುದಿಲ್ಲ; ಕೇವಲ ದಾನಿಯು ನೀಡಿದ ವಿವರದ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗುತ್ತದೆ. ರಕ್ತದ ಕೊರತೆ
ಕಳೆದ ಮೂರು ತಿಂಗಳುಗಳಿಂದ ರಕ್ತದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಕೆಲವು ರಕ್ತ ಕೇಂದ್ರಗಳಲ್ಲಿ ದಾನಿಗಳ ಸಂಖ್ಯೆಯಲ್ಲಿ ಶೇ.45-50ರಷ್ಟು ಕುಸಿತ ಕಂಡುಬಂದಿದೆ. ಆಸ್ಪತ್ರೆ, ರಕ್ತನಿಧಿಗೆ ಭೇಟಿ ನೀಡಿದರೆ ಸೋಂಕಿಗೆ ಒಳಗಾಗಬಹುದು ಎಂಬ ಭಯ ಜನರಲ್ಲಿದೆ. ಆದ್ದರಿಂದ ಕೆಲವರು ಮಾತ್ರ ರಕ್ತದಾನ ಮಾಡಲು ಮುಂದೆ ಬಂದರು. ಹಲವೊಂದು ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ರದ್ದಮಾಡಲಾಯಿತು. ಅಪರೂಪದ ರಕ್ತದ ಗುಂಪಿನ ರಕ್ತ ಅಗತ್ಯವಿರುವ ರೋಗಿಗಳಿಗೆ ಮತ್ತು ಕೇವಲ 5 ದಿನಗಳು ಮಾತ್ರ ಕಾಯ್ದಿಡಬಹುದಾದ ಪ್ಲೇಟ್‌ಲೆಟ್ ಘಟಕಗಳ ಅಗತ್ಯ ಇರುವವರಿಗೆ ಅವುಗಳ ಪೂರೈಕೆ ಮಾಡುವುದು ಒಂದು ದೊಡ್ಡ ಸವಾಲು. ಕನ್ವಲೆಸೆಂಟ್ ಪ್ಲಾಸ್ಮಾ ಸಂಗ್ರಹಣೆ
ಕೋವಿಡ್-19ರಿಂದ ಗುಣಮುಖರಾದ ರೋಗಿಯ ಪ್ಲಾಸ್ಮಾದಲ್ಲಿ ಕೋವಿಡ್-19 ವೈರಸ್ ವಿರುದ್ಧ ಹೋರಾಡುವ ಪ್ರತಿರೋಧಕ ಇರುತ್ತದೆ. ಈ ಸೋಂಕಿನ ವಿರುದ್ಧ ಇಂದಿನವರೆಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದಿರುವ ಕಾರಣ ಕನ್ವಲೆಸೆಂಟ್ ಪ್ಲಾಸ್ಮಾವನ್ನು ರಕ್ತ ನಿಧಿಗಳು ನಿಯಂತ್ರಕ ಪ್ರಾಧಿಕಾರದ ಅನುಮತಿ ಮೇರೆಗೆ ಸಂಗ್ರಹಣೆ ಮಾಡಿ ಅಗತ್ಯವಿರುವ ರೋಗಿಗಳಿಗೆ ಔಷಧವಾಗಿ ಬಳಸಬಹುದು. ಡಾ| ಶಮೀ ಶಾಸ್ತ್ರೀ
ಮುಖ್ಯಸ್ಥರು, ಇಮ್ಯುನೊ ಹೆಮಟಾಲೋಜಿ ಮತ್ತು ಬ್ಲಿಡ್ ಬ್ಯಾಂಕ್ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ