ಶಿಮ್ಲಾ: ಕಳೆದ ಕೆಲ ದಿನಗಳಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿದಂತೆ ಹಲವೆಡೆ ಭಾರೀ ಮಳೆ ಆಗುತ್ತಿದೆ. ಮಳೆಯ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ. ಜನ ಹೊರಗೆ ಹೋಗುವುದಕ್ಕೂ ಪ್ರವಾಹ ಭೀತಿ ಎದುರುರಾಗಿದೆ.
ಈ ಮಳೆಯ ನಡುವೆ ಆಶಿಶ್ ಸಿಂಘಾ ಹಾಗೂ ಶಿವಾನಿ ಠಾಕೂರ್ ವಿವಾಹ ಕಾರ್ಯಕ್ರಮ ವಿಶಿಷ್ಟವಾಗಿ ನೆರವೇರಿದೆ.
ಸೋಮವಾರ (ಜು.10 ರಂದು) ಕುಲುವಿನ ಭುಂಟರ್‌ನಲ್ಲಿ ಶಿವಾನಿ ಠಾಕೂರ್ ಅವರನ್ನು ಮದುವೆಯಾಗಲು ಶಿಮ್ಲಾದ ಕೋಟ್‌ಗಢದಿಂದ ಆಶಿಶ್ ಸಿಂಘಾ ತನ್ನ ‘ಬಾರಾತ್’ ( ದಿಬ್ಬಣದೊಂದಿಗೆ) ತೆರಳಬೇಕಿತ್ತು. ಆದರೆ ಮುಹೂರ್ತದ ಸಮಯ ಮೀರಿದರೂ ಮಳೆ ಮಾತ್ರ ನಿಲ್ಲದೇ ಸುರಿಯುತ್ತಿತ್ತು. ಹೇಗಾದರೂ ಮಾಡಿ ಮದುವೆ ಕಾರ್ಯಕ್ರಮ ನೆರವೇರಸಿಬೇಕೆನ್ನುವ ನಿಟ್ಟಿನಲ್ಲಿ ವಧು – ವರರ ಕುಟುಂಬಸ್ಥರು ವಿಶಿಷ್ಟವಾದ ವಿಧಾನವಾನ್ನು ಅನುರಿಸಿ ವಿವಾಹವನ್ನು ಮಾಡಿಸಿದ್ದಾರೆ.
ರಸ್ತೆಗಳು ಬ್ಲಾಕ್ ಆಗಿರುವ ಕಾರಣ ಆಶಿಶ್ ಸಿಂಘಾ ಹಾಗೂ ಶಿವಾನಿ ಠಾಕೂರ್ ವಿವಾಹ ಆನ್ಲೈನ್ ನಲ್ಲಿ ವಿಡಿಯೋ ಕಾಲ್ ಮೂಲಕ ನೆರವೇರಿದೆ. ಎರಡೂ ಕುಟುಂಬದ ಸದಸ್ಯರು ಹಾಗೂ ವಧು – ವರರು ಕ್ಯಾಮರಾದ ಮುಂದೆ ಕೂತುಕೊಂಡಿದ್ದಾರೆ. ಈ ವೇಳೆ ಅತ್ತ ಕಡೆಯಿಂದ ವಿವಾಹದ ವಿಧಿವಿಧಾನಗಳು ನಡೆದು, ಮದುವೆಯನ್ನು ಮಾಡಿಸಲಾಗಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದ ಕನಿಷ್ಠ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.