ಕಿನ್ನಿಗೋಳಿ: ಕಿನ್ನಿಗೋಳಿಯಿಂದ ಮೂಲ್ಕಿ ಕಾರ್ನಾಡ್ ತನಕದ ರಸ್ತೆಯನ್ನು ಎರಡು ವರ್ಷಗಳ ಹಿಂದೆ 14.8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಚರಂಡಿ ಹೂಳು ತೆಗೆಯದೆ ಕೆಲವೊಂದು ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಮೋರಿಗಳು ಕಸ, ತ್ಯಾಜ್ಯದಿಂದ ತುಂಬಿ ಬ್ಲಾಕ್ ಆಗಿ ಸಮಸ್ಯೆ ಉಂಟುಮಾಡುತ್ತಿದೆ.
ಕಿನ್ನಿಗೋಳಿ ಚರಂಡಿ ಮಾಯಾ?
ಕಿನ್ನಿಗೋಳಿ ಪೇಟೆಯಲ್ಲಿ ಚರ್ಚ್ ಸಮೀಪದ ಕೆಳ ಭಾಗದಿಂದ ಭಟ್ಟ ಕೋಡಿಯ ತನಕ ಸುಮಾರು 500 ಮೀಟರ್ ರಸ್ತೆಯ ಇಕ್ಕಲೆದಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಿ, ಕಾಂಕ್ರೀಟ್ ಚಪ್ಪಡಿ ಹಾಸಿ ಫುಟ್‌ಪಾತ್ ಸಿದ್ಧಪಡಿಸಲಾಗಿದೆ. ಆದರೆ ಸುಖಾನಂದ ಶೆಟ್ಟಿ ಸರ್ಕಲ್ ನಿಂದ ರಾಜಾಂಗಣದ ಒಂದು ಬದಿಯಲ್ಲಿ 300 ಮೀಟರ್ ತನಕ ಕಾಂಕ್ರೀಟ್ ಚರಂಡಿ ಆಗಬೇಕಾಗಿದ್ದು, ಆ ಕುರಿತು ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. ಆದರೆ ಇಲ್ಲಿ ಪಾರ್ಕಿಂಗ್ ಮಾಡಲು ಪಟ್ಟಣ ಪಂಚಾಯತ್ ರಸ್ತೆಯನ್ನು ವಿಸ್ತರಿಸಿದ್ದರೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಸಮಸ್ಯೆಯುಂಟಾಗಿದೆ.
ಮೋರಿಗಳು ಬ್ಲಾಕ್
ಕಿನ್ನಿಗೋಳಿ ಭಟ್ಟಕೋಡಿಯ ಶಿಬರೂರು ದ್ವಾರ, ಎಸ್ ಕೋಡಿ, ಕೆಂಚನಕೆರೆಯಲ್ಲಿ ಮೋರಿಗಳು ಕಸ, ತಾಜ್ಯದಿಂದ ತುಂಬಿ ಬ್ಲಾಕ್ ಆಗಿ ಮಳೆಯ ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆಯಲ್ಲಿ ಕೃತಕ ನೆರೆ ನಿರ್ಮಾಣವಾಗಿದೆ. ಕುಬೆವೂರು, ಪುನರೂರು, ಪದ್ಮನೂರು, ಭಾಗದಲ್ಲಿಯೂ ಇದೇ ಸಮಸ್ಯೆ ಉಂಟಾಗಿದೆ.