Advertisement

ಬ್ಲಾಕ್ ಫಂಗಸ್ ಇಂಜೆಕ್ಷನ್ ಕೂಡಲೇ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ

07:29 PM May 22, 2021 | Team Udayavani |

ಬೆಂಗಳೂರು : ರಾಜ್ಯಕ್ಕೆ ಮ್ಯೂಕೊರ್‍ಮೈಕೋಸಿಸ್ (ಬ್ಲಾಕ್ ಫಂಗಸ್) ಕಾಯಿಲೆಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬಳಸಲಾಗುತ್ತಿರುವ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ನ್ನು ಕೂಡಲೇ ಹಂಚಿಕೆ ಮಾಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ ಅವರು ಪತ್ರ ಬರೆದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Advertisement

“ದೇಶದಲ್ಲಿ ಕರ್ನಾಟಕ ಎರಡನೇ ಅತೀ ಹೆಚ್ಚು ಕೋವಿಡ್ ಪಾಸಿಟಿವ್ ಸೋಂಕಿತರನ್ನ ಹೊಂದಿದ ರಾಜ್ಯವಾಗಿದೆ ಹಾಗೂ ಪಾಸಿಟಿವಿಟಿ ದರ ಕಳೆದ ವಾರಕ್ಕಿಂತಲು ಶೇ. 30ರಷ್ಟು ಹೆಚ್ಚಳವಾಗಿದೆ. ಹಾಗೆಯೇ ಆಸ್ಪತ್ರೆಯಿಂದ ಗುಣಮುಖರಾಗಿ ತೆರಳುತ್ತಿರುವ ಸೋಂಕಿತರ ಸಂಖ್ಯೆಯು ಹೆಚ್ಚಾಗಿದೆ. ಆದರೆ, ಕೋವಿಡ್ ನಿಂದ ಗುಣಮುಖರಾದ ನಂತರ ಸಮಸ್ಯೆ ಸಿಲುಕುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಮ್ಯೂಕೊರ್‍ಮೈಕೋಸಿಸ್ ಕಾಯಿಲೆಯು ಸಾಕಷ್ಟು ಕಳವಳ ಮೂಡಿಸಿದ್ದು, ಇದರಲ್ಲಿ ಸಾವಿನ ಪ್ರಮಾಣವು ಅಧಿಕವಾಗಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಆ್ಯಂಟಿ ಫಂಗಲ್ ಔಷಧಿಯು ಈ ಸಂದರ್ಭದಲ್ಲಿ ತೀರಾ ಅತ್ಯಗತ್ಯವಾಗಿದ್ದು, ಮ್ಯೂಕೊರ್‍ಮೈಕೋಸಿಸ್ ಕಾಯಿಲೆ ಗುಣಪಡಿಸುವಲ್ಲಿ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಅತ್ಯಗತ್ಯವಾಗಿದೆ”, ಎಂದಿದ್ದಾರೆ.

ಈಗಾಗಲೇ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ನಿರ್ದೇಶನಾಲಯ ನೀಡಿದ ಮಾಹಿತಿಯನುಸಾರ 144  ರೋಗಿಗಳು ದಾಖಲಾಗಿದ್ದಾರೆ. ರಾಜ್ಯ ಸರ್ಕಾರವು ಮ್ಯೂಕೊರ್‍ಮೈಕೋಸಿಸ್ ಕಾಯಿಲೆಗೆ ಚಿಕಿತ್ಸೆ ನೀಡುವ ಕುರಿತಂತೆ ನಿರ್ದಿಷ್ಟ ಮಾರ್ಗಸೂಚಿಯನ್ನ ಹೊರಡಿಸಿದೆ. ಈ ಪ್ರಕಾರ ಪ್ರತಿ ರೋಗಿಗೆ ಈ ಔಷಧಿಯು ಅಂದಾಜು 70 ವಯಲ್ ಗಳು ಬೇಕಾಗಿದ್ದು, ಗರಿಷ್ಠ 360 ವಯಲ್ ಗಳ ವರೆಗೂ ವಿಸ್ತರಿಸಬಹುದಾಗಿದೆ. ಈಗಾಗಲೇ 144 ರೋಗಿಗಳು ಈ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಮುಂದಿನ 15 ದಿನಗಳೊಳಗೆ ಈ ಸಂಖ್ಯೆ ದ್ವಿಗುಣ ಗೊಳ್ಳಬಹುದಾಗಿದೆ. ಹೀಗಾಗಿ ಈ ಸಂಖ್ಯೆಯನುಸಾರ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ಪ್ರತಿ ವಾರಕ್ಕೆ ಕರ್ನಾಟಕಕ್ಕೆ ಸುಮಾರು 9800 ವಯಲ್ ಗಳ ಅವಶ್ಯಕತೆ ಇರುತ್ತದೆ. ಆದರೆ ಯಾವುದೇ ಸಂಸ್ಥೆಯು ಕರ್ನಾಟಕದಲ್ಲಿ ಲಿಪೊಸೊಮಲ್ ಅಂಫೋಟೆರಿಸಿನ್ ಬಿ ಇಂಜೆಕ್ಷನ್ ತಯಾರಿಕೆ ನಡೆಸುತ್ತಿಲ್ಲ,” ಎಂದು ವಿವರಿಸಿದ್ದಾರೆ.

“ಈ ಕಾರಣಕ್ಕೆ ಕರ್ನಾಟಕವು ರಾಜ್ಯದ ಹೊರ ಭಾಗದ ಉತ್ಪಾದಕರ ಮೇಲೆಯೇ ಅವಲಂಭಿತವಾಗಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಕೇಂದ್ರವು ಕರ್ನಾಟಕಕ್ಕೆ ಅಗತ್ಯವಿರುವಷ್ಟು ವಯಲ್ ಗಳನ್ನ ಹಂಚಿಕೆ ಮಾಡಬೇಕು” ಎಂದು ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next