Advertisement

ನಗರದಲ್ಲಿ ಬ್ಲಾಕ್‌ಸ್ಪಾಟ್‌ ತೆರವಿಗೆ ಸಿಗದ ಸ್ಪಂದನೆ

12:02 PM Dec 03, 2018 | |

ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಉತ್ತಮ ರ್‍ಯಾಂಕ್‌ ಪಡೆಯಲು ಹಲವು ಕಾರ್ಯಕ್ರಮಗಳನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಆದರೆ, ಕೆಳ ಹಂತದ ಅಧಿಕಾರಿಗಳ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿಲ್ಲ. ಇದರಿಂದಾಗಿ ಮತ್ತೂಮ್ಮೆ ಹಿನ್ನಡೆ ಅನುಭವಿಸುವ ಆತಂಕ ಶುರುವಾಗಿದೆ. 

Advertisement

ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ಲಾಕ್‌ಸ್ಪಾಟ್‌ (ತ್ಯಾಜ್ಯ ರಾಶಿ) ಪ್ರದೇಶಗಳಲ್ಲಿ ರಂಗೋಲಿ ಬಿಡಿಸಲಾಗುತ್ತಿದೆ. ಜತೆಗೆ ತಮ್ಮ ವಾರ್ಡ್‌ಗಳಲ್ಲಿ ಅಧಿಕಾರಿಗಳು ಇಂತಿಷ್ಟು ಬ್ಲಾಕ್‌ಸ್ಪಾಟ್‌ಗಳನ್ನು  ತೆರವುಗೊಳಿಸಬೇಕೆಂಬ ಅಭಿಯಾನವನ್ನೂ ಜಾರಿಗೊಳಿಸಲಾಗಿದೆ. ಆದರೆ, ವಾರ್ಡ್‌ ಮಟ್ಟದಲ್ಲಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯದಿರುವುದು ಪಾಲಿಕೆಗೆ ತಲೆನೋವಾಗಿ ಪರಿಗಣಿಸಿದೆ. 

ಆರಂಭದಲ್ಲಿ ನಗರದ ಕೇಂದ್ರ ಭಾಗದ ಕೆಲವು ವಾರ್ಡ್‌ಗಳಲ್ಲಿ ಬ್ಲಾಕ್‌ಸ್ಪಾಟ್‌ ಪ್ರದೇಶಗಳಲ್ಲಿ ಪೌರಕಾರ್ಮಿಕರಿಂದ ರಂಗೋಲಿ ಬಿಡಿಸುವ ಮೂಲಕ ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಆದರೆ ವಾರ್ಡ್‌ ಮಟ್ಟದಲ್ಲಿ ಬ್ಲಾಕ್‌ಸ್ಪಾಟ್‌ ತೆರವು ಕಾರ್ಯ ವೇಗ ಕಳೆದುಕೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಿದ ಎರಡು ಮೂರು ದಿನಗಳಿಗೆ ಮತ್ತೆ ತ್ಯಾಜ್ಯ ರಾಶಿ ಬಿದ್ದಿರುವುದು ಕಂಡುಬರುತ್ತಿದೆ.

ನಗರದಲ್ಲಿ ಪಾಲಿಕೆಯಿಂದ 1700 ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಕೇವಲ 300 ಕಡೆಯಷ್ಟೆ ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಲಾಗಿದೆ. ಅದರಂತೆ ಡಿಸೆಂಬರ್‌ 15ರೊಳಗೆ ಕೇಂದ್ರ ಸರ್ಕಾರಕ್ಕೆ ಪಾಲಿಕೆಯಿಂದ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಬೇಕಿದ್ದು, ಮುಂದಿನ 13 ದಿನಗಳಲ್ಲಿ ಉಳಿದ 1400 ಬ್ಲಾಕ್‌ಸ್ಪಾಟ್‌ಗಳು ತೆರವಾಗುತ್ತವೆಯೇ ಎಂಬ ಪ್ರಶ್ನೆ ಮೂಡಿಸಿದೆ. 

150 ಚಾಲೆಂಜ್‌ಗೆ ವೇಗ ನೀಡಿದ ಅಧಿಕಾರಿಗಳು: ನಗರದಲ್ಲಿನ ಬ್ಲಾಕ್‌ಸ್ಪಾಟ್‌ಗಳ ನಿವಾರಣೆಗಾಗಿ ಪಾಲಿಕೆಯ ಘನತ್ಯಾಜ್ಯ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿಯರ್‌(ಎಇಇ)ಗಳಿಗೆ “ಕ್ಲೀನ್‌ 150 ಚಾಲೆಂಜ್‌’ ನೀಡಲಾಗಿದೆ. ಅದರಂತೆ ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 6 ಕಡೆ ತ್ಯಾಜ್ಯ ಎಸೆಯುವ ಸ್ಥಳಗಳನ್ನು ಸ್ವಚ್ಛಗೊಳಿಸಿ ವರದಿ ನೀಡುವಂತೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್‌ ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು 150 ಸ್ಥಳಗಳ ಪೈಕಿ 80 ಕಡೆ ಮಾತ್ರ ಅಭಿಯಾನ ನಡೆಸಿದ್ದು, 70 ಸ್ಥಳಗಳು ಬಾಕಿಯಿವೆ.

Advertisement

ಪ್ರಮುಖ ಸ್ಥಳಗಳಿಗೆ ಆದ್ಯತೆ: ಬಿಬಿಎಂಪಿ ಅಧಿಕಾರಿಗಳ ಸೂಚನೆಯಂತೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳಲ್ಲಿ ಉಲ್ಬಣವಾದ ಬ್ಲಾಕ್‌ಸ್ಪಾಟ್‌ಗಳ ತೆರವಿಗೆ ಆದ್ಯತೆ ನೀಡುವ ಬದಲಿಗೆ, ಹೆಚ್ಚಿನ ಜನರು ಸಂಚಾರ ಮಾಡುವಂತಹ ರಸ್ತೆಗಳು, ಪ್ರಮುಖ ಜಂಕ್ಷನ್‌ಗಳು, ಸಂಚಾರ ದಟ್ಟಣೆಯಿರುವ ಸ್ಥಳಗಳು ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಬ್ಲಾಕ್‌ಸ್ಪಾಟ್‌ಗಳನ್ನು ತೆರವು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಶೇಷ ಆಯುಕ್ತರು ಸೂಚಿಸಿದ್ದಾರೆ. ಜತೆಗೆ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವಂತೆಯೂ ನಿರ್ದೇಶನ ನೀಡಿದ್ದಾರೆ.

ಸ್ವಚ್ಛ ಸರ್ವೇಕ್ಷನ್‌ ಅಭಿಯಾನದ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ನಗರದಲ್ಲಿನ 1,700 ಬ್ಲಾಕ್‌ಸ್ಪಾಟ್‌ಗಳ ಪೈಕಿ ಈಗಾಗಲೇ 300ಕ್ಕೂ ಹೆಚ್ಚಿನ ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಲಾಗಿದ್ದು, ಡಿಸೆಂಬರ್‌ 15ರ ವೇಳೆಗೆ ಇನ್ನಷ್ಟು ಸ್ಥಳಗಳನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.
-ರಂದೀಪ್‌, ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next