ಕಪ್ಪು ಬಣ್ಣಕ್ಕೆ ತನ್ನದೇ ಆದ ಮಹತ್ವವಿದೆ. ಚಿಕ್ಕ ಮಗುವಿಗೆ ದೃಷ್ಟಿ ತಗುಲಬಾರದೆಂದು ಕೆನ್ನೆ ಮತ್ತು ಹಣೆಗೆ ದಿನನಿತ್ಯ ಕಾಡಿಗೆ ಬೊಟ್ಟು ಇಡುವುದು ಅಮ್ಮಂದಿರ ಮೆಚ್ಚಿನ ಅಭ್ಯಾಸ. ಕೈಗೆ, ಕಾಲಿಗೆ, ಕೊರಳಿಗೆ ಕಪ್ಪು ಬಣ್ಣದ ಮಣಿಸರವನ್ನೂ,ದಾರವನ್ನು ಕಟ್ಟುವುದೂ ಇದೆ.
ಅಮ್ಮಂದಿರು ತಮ್ಮ ಮಕ್ಕಳು ಬೆಳೆದು ದೊಡ್ಡವರಾದರೂ ಸಹ ಅವರಿಗೆ ದೃಷ್ಟಿ ತೆಗೆಯುವುದು, ದೃಷ್ಟಿಗಾಗಿ ಕಪ್ಪು ದಾರವನ್ನು ಒತ್ತಾಯ ಮಾಡಿ ಕಟ್ಟುವುದನ್ನು ಬಿಡುವುದಿಲ್ಲ. ತನ್ನ ಕರುಳಕುಡಿ ಸದಾ ಚೆನ್ನಾಗಿ ಇರಬೇಕು; ಯಾರ ಕೆಟ್ಟ ದೃಷ್ಟಿಯೂ ಬೀಳಬಾರದೆಂದು ಉಪ್ಪು, ಮೆಣಸು ಸುಳಿದು, ಒಲೆಗೆ ಹಾಕಿ ಚಟ್ ಚಟ್ ಶಬ್ದ ಬರಿಸಿ, ಎಲ್ಲ ದೃಷ್ಟಿ ನಾಶವಾಯಿತು ಎಂಬ ನಿರಾಳತೆಯಿಂದ ಒಲೆಯ ಕಪ್ಪು ಮಸಿಯನ್ನು ತಂದು ಮಕ್ಕಳ ಹಣೆಗೆ ಇಡುತ್ತಾರೆ. ನಮ್ಮ ಅಮ್ಮ ನಾನು ಅಮ್ಮನಾದರೂ ನನಗೆ ಆಗಾಗ ದೃಷ್ಟಿ ತೆಗೆಯುವುದು ಬಿಡೊಲ್ಲ.
ನಮ್ಮನ್ನು ಕೆಟ್ಟ ದೃಷ್ಟಿಯಿಂದ ಕಾಪಾಡುವ ಈ ಕಪ್ಪು ಬಣ್ಣದ ಬಗ್ಗೆ ನನಗೆ ಎಲ್ಲಿಲ್ಲದ ವ್ಯಾಮೋಹ. ಚಿಕ್ಕಂದಿನಿಂದಲೂ ಕಪ್ಪು ಬಣ್ಣದ ಬಟ್ಟೆಗಳನ್ನು ತುಂಬಾ ಇಷ್ಟಪಟ್ಟು ತೆಗೆದುಕೊಂಡವಳು ನಾನು. ಈಗಲೂ ನನ್ನ ಬಳಿಯಿರುವ ಸೀರೆ, ಕುರ್ತಾಗಳಲ್ಲಿ ಬಹುಪಾಲು ಕಪ್ಪು ಬಣ್ಣದವೇ. ಯಾವುದೇ ಸೀರೆ ಅಂಗಡಿಗೆ ಹೋದರೂ ರಂಗುರಂಗಿನ ವೈವಿಧ್ಯಮಯ ವಿನ್ಯಾಸದ ಎಷ್ಟೇ ಸೀರೆಗಳಿದ್ದರೂ ನನ್ನ ಕಣ್ಣು ಇಷ್ಟಪಡುವುದು ಮಾತ್ರ ಕಪ್ಪು ಬಣ್ಣದ ಸೀರೆಯನ್ನು.
ಕಪ್ಪು ಬಣ್ಣದ ಮೇಲೆ ಕೆಂಪು ಚಿತ್ತಾರವಿದ್ದರಂತೂ ಅಂದು ನಾ ಖರೀದಿಸುವ ಸೀರೆ ಖಂಡಿತ ಅದೇ ಆಗಿರುತ್ತದೆ. ಕಪ್ಪು ಬಣ್ಣದ ಸೀರೆ ತೋರಿಸಿದ ಮೇಲೆ ಅಂಗಡಿಯವನು ಇಪ್ಪತ್ತು ಸೀರೆ ತೋರಿಸಿದರೂ ಸಹ ಕೊನೆಯಲ್ಲಿ ಎಲ್ಲ ಹರಡಿದ ಸೀರೆಗಳ ಅಡಿಯಿಂದ ನನ್ನ ಮನಸ್ಸನ್ನು ಮೊದಲೇ ಕದ್ದಿದ್ದ ಕಪ್ಪು ಸೀರೆಯನ್ನು ತಡಕಾಡಿ ಹುಡುಕಿ ತೆಗೆದುಕೊಂಡು ಬಂದಿದ್ದೂ, ಹರಡಿದ ಸೀರೆ ಮಡಚಿಡುವಾಗ ಅಂಗಡಿ ಹುಡುಗ ನನ್ನನ್ನು ಮನಸ್ಸಲ್ಲೇ ಬೈದು ಕೊಂಡದ್ದೂ ಇದೆ.
ನನ್ನ ಬಟ್ಟೆಯ ಸಂಗ್ರಹವನ್ನು ಒಮ್ಮೆ ಸೂಕ್ಷ್ಮವಾಗಿ ನೋಡಿದ ನಾನು ಅಯ್ಯೋ! ಎಲ್ಲ ಕಪ್ಪು ಬಣ್ಣದ ಸೀರೆ, ಚೂಡಿದಾರ್, ಕುರ್ತಾಗಳು. ಸಾಕಪ್ಪ ಇನ್ಮೇಲೆ ನಾನು ಅಂಗಡಿಗೆ ಹೋದರೇ ಖಂಡಿತ ಕಪ್ಪು ಬಣ್ಣದ ಕಡೆ ನೋಡೋದಿಲ್ಲ. ಒಂದೇ ತರಹದ ಬಣ್ಣ ಬೇಸರ. ಹಸುರು, ಕಿತ್ತಳೆ, ಹಳದಿ, ನೀಲಿ, ಗುಲಾಬಿ ಹೀಗೆ ಬಗೆ ಬಗೆಯ ಬಣ್ಣದ ಸೀರೆಗಳು ನನ್ನ ಅಲ್ಮೆರಾ ಸೇರಬೇಕು. ದಿನಕ್ಕೊಂದು ಬಣ್ಣ ತೊಟ್ಟು ಆನಂದಿಸಬೇಕು. ಬೇರೆ ಬೇರೆ ಬಣ್ಣ ನನ್ನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡಬೇಕು.ಕನ್ನಡಿ ಮುಂದೆ ದಿನದಿನ ನನಗೆ ನಾನೇ ಹೊಸದಾಗಿ ಕಾಣಬೇಕು ಅಂದುಕೊಂಡಿದ್ದೂ ಇದೆ.
ಇತ್ತೀಚೆಗೆ ಸೀರೆ ಅಂಗಡಿಗೆ ಹೋದಾಗ ಕಷ್ಟಪಟ್ಟು ಕಪ್ಪು ಬಣ್ಣದ ಸೀರೆಗಳ ಕಡೆ ನೋಡದೆ ಬೇರೆ ಬೇರೆ ಬಣ್ಣದ ಸೀರೆಗಳನ್ನು ಖರೀದಿಸಿ ತಂದು ನನ್ನ ಸೀರೆಗಳ ಲೋಕವನ್ನು ಕಪ್ಪು ಲೋಕದಿಂದ ಬಣ್ಣಬಣ್ಣದ ಲೋಕವಾಗಿ ಪರಿವರ್ತನೆ ಮಾಡಿದ್ದೇನೆ. ಬೇರೆ ಬೇರೆ ಬಣ್ಣಗಳ ಅನುಭೂತಿಯನ್ನು ಸವಿಯುತ್ತ ಸಂಭ್ರಮಿಸಿದ್ದೇನೆ.ಆದರೂ ಕಳೆದ ವಾರ ಆನ್ಲೈನ್ ಶಾಪಿಂಗ್ ಮಾಡುವಾಗ ಕಪ್ಪು ಬಣ್ಣದ ಮೇಲೆ ಕೆಂಪು ಕಸೂತಿ ಹಾಕಿ ಮಧ್ಯೆ ಮಧ್ಯೆ ಕನ್ನಡಿ ತುಣುಕುಗಳನ್ನು ಅಂಟಿಸಿದ ಸೀರೆ ನನ್ನ ಮನಸ್ಸನ್ನು ಅಪಹರಿಸಿದ್ದರಿಂದ ಆರ್ಡರ್ ಮಾಡದೇ ಇರಲು ಸಾಧ್ಯವೇ ಆಗಲಿಲ್ಲ. ನನ್ನ ಈ ಕಪ್ಪು ಬಣ್ಣದ ಮೋಹಕ್ಕೆ ನನಗೇ ನಗು ಬರುವಂತಾಯಿತು.
ಹೀಗೆ ಕಪ್ಪು ಬಣ್ಣಕ್ಕೂ ನನಗೂ ಒಂದು ರೀತಿಯ ಬಿಡಿಸಲಾರದ ನಂಟು. ಕರಿಮಣಿಸರ, ಕಪ್ಪು ಮಣಿಯಿರುವ ಓಲೆ, ಉಂಗುರ, ಬಳೆಗಳೆಂದರೆ ಪಂಚಪ್ರಾಣ. ಬ್ಲಾಕ್ ಈಸ್ ಬ್ಯೂಟಿಫುಲ್ ಎನ್ನುವುದು ಸತ್ಯ. ನನ್ನ ಮನಸೂರೆಗೊಂಡ ಕಪ್ಪು ಬಣ್ಣಕ್ಕೆ ನನ್ನ ಈ ಲೇಖನ ಅರ್ಪಣೆ.
-ಭವ್ಯಾ ಟಿ.ಎಸ್.
ಶಿಕ್ಷಕರು, ಹೊಸನಗರ