ಗಾತ್ರದಲ್ಲಿ ಮನೆ ಗುಬ್ಬಿಗಿಂತ ಸ್ವಲ್ಪ ದೊಡ್ಡದಿರುವ ಈ ಹಕ್ಕಿ, ಚಳಿಗಾಲ ಕಳೆಯಲು ದಕ್ಷಿಣ ಭಾರತಕ್ಕೆ ವಲಸೆ ಬರುತ್ತದೆ.Black-headed Bunting (Emberiza melanocephala Scoppoli) ( RM – Sparrow + ಕೃಷಿ ಭೂಮಿಯ ಪ್ರದೇಶವೇ ಇದರ ಇರುನೆಲೆ. ಬಟ್ಟಲಾಕಾರದಲ್ಲಿ ಗೂಡು ನಿರ್ಮಿಸುವ ಈ ಹಕ್ಕಿ, ಒಮ್ಮೆಗೆ 4ರಿಂದ 6 ಮೊಟ್ಟೆ ಇಡುತ್ತದೆ.
ಇದನ್ನು ಕಪ್ಪು ತಲೆಯ ದೊಡ್ಡ ಗುಬ್ಬಚ್ಚಿ ಎಂದೂ ಕರೆಯುತ್ತಾರೆ. ಏಕೆಂದರೆ, ಆಕಾರದಲ್ಲಿ ಇದು ಮನೆಗುಬ್ಬಿಗಿಂತ ದೊಡ್ಡದಾಗಿದೆ. ಇದು 17 ಸೆಂ.ಮೀನಷ್ಟು ದೊಡ್ಡದಾದ ಹಕ್ಕಿ. ರೆಕ್ಕೆಯ ಅಗಲ 23-29 ಸೆಂ.ಮೀ. ಇರುತ್ತದೆ. ಭಾರ ಸುಮಾರು 23-35 ಗ್ರಾಂ.
ಗುಬ್ಬಚ್ಚಿ, ಅದರಲ್ಲೂ ಹಳದಿ ಗುಬ್ಬಿಯ ಬಣ್ಣವನ್ನು ಇದು ತುಂಬಾ ಹೋಲುತ್ತದೆ. ಹೆಲ್ಮೆಟ್ ಅನ್ನು ನೆನಪಿಗೆ ತರುವ ತಲೆಯ ಮೇಲಿನ ಕಪ್ಪು ಬಣ್ಣ, ರೆಕ್ಕೆಯ ತುದಿ, ಮೇಲಾºಗದಲ್ಲಿರುವ ಕಪ್ಪು ಗೀರು ಈ ಹಕ್ಕಿಯನ್ನು ಗುಂಪಿನಿಂದ ಬೇರ್ಪಡಿಸಿ ನೋಡಲು ಸಹಾಯಕವಾಗಿದೆ. ಗಂಡು ಹಕ್ಕಿ ಹೆಣ್ಣಿಗಿಂತ ಸ್ವಲ್ಪ ದಪ್ಪ ಇರುತ್ತದೆ. ತಲೆಯಲ್ಲಿರುವ ಕಪ್ಪು ಬಣ್ಣ, ಕುತ್ತಿಗೆ ಅಡಿಯ ಬಿಳಿಬಣ್ಣ ಎದ್ದು ಕಾಣುತ್ತದೆ. ಕಪ್ಪು ತಲೆಯ ಬಂಟಿಂಗ್, ಎಂಬೆರಿದಿಜಿಯಾ ಕುಟುಂಬಕ್ಕೆ ಸೇರಿದ ಹಕ್ಕಿ. ಇರಾನ್‌ನಿಂದ ದಕ್ಷಿಣ ಏಷಿಯಾದ ಪೂರ್ವ ಭಾಗಕ್ಕೆ ವಲಸೆ ಹೋಗುತ್ತವೆ. ಅದೇ ರೀತಿ ಕರ್ನಾಟಕ, ಆಂಧ್ರ, ತಮಿಳುನಾಡುಗಳಿಗೂ ಚಳಿಗಾಲ ಕಳೆಯಲು ಬರುತ್ತವೆ. ಇವು ಚಿಕ್ಕ ಗಿಡ ಗಂಟಿಗಳಿರುವ ಜಾಗ, ಜೋಳ, ರಾಗಿ, ನವಣೆ ಮೊದಲಾದ ಹೊಲಗಳಿರುವ ಪ್ರದೇಶ, ಭತ್ತದ ಗದ್ದೆ ಇರುವ ಕೃಷಿ ಭೂಮಿಯ ಸ್ಥಳಗಳನ್ನು ಇರು ನೆಲೆಯಾಗಿಸಿಕೊಳ್ಳುತ್ತದೆ. ಈ ಹಕ್ಕಿ ಚಿಕ್ಕ ಮತ್ತು ದೊಡ್ಡ ಗುಂಪಿನಲ್ಲೂ ವಲಸೆ ಬರುವುದು ವಿಶೇಷ. ಇದರ ಜೊತೆಯಲ್ಲೇ ಇದನ್ನೆ ಹೋಲುವ ಆದರೆ ತಲೆ ಮಾತ್ರ ಸ್ವಲ್ಪ ತಿಳಿ ಕೇಸರಿ ಇರುವ ಈ ಗುಂಪಿಗೆ ಸೇರಿದ ಕೇಸರಿ ತಲೆ ಬಂಟಿಂಗ್ ಸಹ ಇರುತ್ತದೆ. ಈ ಎರಡೂ ಹಕ್ಕಿಗಳಿಂದ ಕ್ರಾಸ್‌ಬ್ರಿàಡ್ ಹಕ್ಕಿಗಳು ಜನಿಸಿರುವುದುಂಟು.
ಈ ಹಕ್ಕಿ ಅತಿದೂರ ಅಂದರೆ 7,000 ಕಿ. ಮೀ. ದೂರದವರೆಗೂ ವಲಸೆ ಹೋಗುತ್ತದೆ. ಪಕ್ಷಿ ತಜ್ಞರು ಕಪ್ಪುತಲೆಯ ಬಂಟಿಗ್‌ಗೆ ಉಂಗುರ ತೊಡಿಸಿ ಅಧ್ಯಯನ ನಡೆಸಿದಾಗ ಈ ಸಂಗತಿ ತಿಳಿದು ಬಂದಿದೆ. ಕಟಾವಿಗೆ ಬಂದ ಪೈರು ಅಂದರೆ ಇದಕ್ಕೆ ಪಂಚ ಪ್ರಾಣ. ಹೀಗಾಗಿ, ಅದರ ತೆನೆಯ ಮೇಲೆ ಕುಳಿತು, ಕಾಳುಗಳನ್ನು ತಿಂದು ಬೆಳೆಯನ್ನು ಧ್ವಂಸಮಾಡಿ ರೈತರ ಕೋಪಕ್ಕೂ ಕಾರಣವಾಗುತ್ತದೆ. ಕಾಳು, ಜೋಳ, ನವಣೆ ಮೊದಲಾದ ಧಾನ್ಯ ಮತ್ತು ಹುಲ್ಲು ಬೀಜಗಳೇ ಇದರ ಆಹಾರ. ಈ ಬೆಳೆಗಳಿಗೆ ಹಾನಿಮಾಡುವ ಕೀಟಗಳನ್ನು ಇದು ನಿಯಂತ್ರಿಸುವುದರಿಂದ ರೈತರಿಗೆ ಉಪಕಾರ ಸಹ ಆಗುತ್ತದೆ. ಈ ಹಕ್ಕಿ ವಂಶಾಭಿವೃದ್ಧಿ ಮಾಡುವುದು ಮಾರ್ಚ್ ನಿಂದ ಜುಲೈ ತನಕ.
ಈ ಹಕ್ಕಿ ಬೇಸಿಗೆ ಕಾಲದಲ್ಲಿ ಮರಿಮಾಡುತ್ತವೆ. ಚಿಕ್ಕ ಗಿಡಗಂಟಿಗಳ ಮಧ್ಯ ಇಲ್ಲವೇ ನೆಲ ಮಟ್ಟದಲ್ಲಿ ಒಣಗಿದ ಹುಲ್ಲು ನಾರು ಹಾಗೂ ಆಡಿನ ಕೂದಲನ್ನು ಸೇರಿಸಿ ಬಟ್ಟಲಾಕಾರದಲ್ಲಿ ಗೂಡನ್ನು ನಿರ್ಮಿಸುತ್ತದೆ. ಇದು 1-2 ಮೀ. ಎತ್ತರದಲ್ಲಿ ಗೂಡನ್ನು ಕಟ್ಟುತ್ತದೆ. ತಿಳಿ ಬೂದು ಮಿಶ್ರಿತ ಬಿಳೀ ಮೊಟ್ಟೆ ಇಡುತ್ತದೆ.
ಒಂದು ಸಲಕ್ಕೆ 4 ರಿಂದ 6 ಮೊಟ್ಟೆ ಇಟ್ಟು ಅದಕ್ಕೆ 13 ದಿನ ಕಾವುಕೊಡುತ್ತದೆ. ಆರಂಭದಲ್ಲಿ ಚಿಕ್ಕ ಹುಳುಗಳನ್ನು ಮರಿಗಳಿಗೆ ಗುಟುಕು ನೀಡುವುದು ರೂಢಿ. ಸ್ವಲ್ಪ ಬಲಿತಮೇಲೆ ಕಾಳು, ಹುಲ್ಲಿನ ಬೀಜ ನೀಡುತ್ತದೆ. ಒಟ್ಟು 23 ದಿನದಲ್ಲಿ ಮೊಟ್ಟೆ ಮರಿಯಾಗುತ್ತದೆ.
ಪಿ.ವಿ.ಭಟ್ ಮೂರೂರು