Advertisement

ಬೌರಿಂಗ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ: ಸಚಿವ ಡಾ.ಕೆ.ಸುಧಾಕರ್

04:19 PM May 16, 2021 | Team Udayavani |

ಬೆಂಗಳೂರು: ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡುತ್ತಿದ್ದು, ನಂತರ ಬೇರೆ ಜಿಲ್ಲೆಗಳಿಗೂ ಈ ಸೇವೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸ್ಟೀರಾಯಿಡ್ ಅಧಿಕವಾಗಿ ಬಳಸಿರುವವರಿಗೆ ಹಾಗೂ ಮಧುಮೇಹ ಹೆಚ್ಚಿರುವವರಿಗೆ ಕೋವಿಡ್ ಬಂದಾಗ  ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಮೂಗಿನಿಂದ ಆರಂಭವಾಗುವ ಈ ರೋಗ ಕಣ್ಣಿಗೆ ಹಾನಿ ಮಾಡುತ್ತದೆ. ದೃಷ್ಟಿ ಕೂಡ ಕಳೆದುಕೊಳ್ಳುವ ಅಪಾಯವಿರುತ್ತದೆ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಸಾವು ಕೂಡ ಬರಬಹುದು. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಾಗಲೇ ಇಲ್ಲಿನ ನೇತ್ರ ತಜ್ಞರೊಂದಿಗೆ ಸಮಾಲೋಚನೆ ಮಾಡಲಾಗಿದೆ. ನಾಳೆಯಿಂದಲೇ ಬೌರಿಂಗ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ನಂತರ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಆರಂಭಿಸಲಾಗುವುದು ಎಂದರು.

ಇದನ್ನೂ ಓದಿ :ಬಾದಾಮಿ ಕ್ಷೇತ್ರಕ್ಕೆ ಮೂರು ಆಂಬುಲೆನ್ಸ್ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ನೇತ್ರ ತಜ್ಞರು ಸೇರಿದಂತೆ ಮೂರ್ನಾಲ್ಕು ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದೆ. ಇದಕ್ಕೆ ಯಾವ ಬಗೆಯ ಚಿಕಿತ್ಸೆ ನೀಡಬೇಕೆಂದು ಈ ಸಮಿತಿ ಸಲಹೆ ನೀಡಲಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಸತತ ಏಳು ವಾರಗಳ ಕಾಲ ನೀಡಬೇಕಿದ್ದು, 2-3 ಲಕ್ಷ ರೂ. ಖರ್ಚಾಗುತ್ತದೆ. ಇದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಯಾರಿಗೇ ಈ ಸಮಸ್ಯೆ ಇದ್ದರೂ ತಕ್ಷಣ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಬೇಕು. ಇದಕ್ಕೆ ಬೇಕಿರುವ ಆಂಪೊಟೆರಿಸಿನ್ ಔಷಧಿಯನ್ನು ಕೇಂದ್ರ ಸರ್ಕಾರ ನೀಡಲಿದ್ದು, 20 ಸಾವಿರ ಡೋಸ್ ಗೆ ಮನವಿ ಮಾಡಲಾಗಿದೆ ಎಂದರು.

ಯಾರೂ ವೈದ್ಯರ ಬಳಿ ಸಲಹೆ ಪಡೆಯದೆ ಸ್ಟೀರಾಯಿಡ್ ಮೊದಲಾದ ಔಷಧಿ ಪಡೆಯಬಾರದು. ವೈದ್ಯರು ಕೂಡ ಜನರಿಗೆ ರೋಗ ನಿರೋಧಕ ಹೆಚ್ಚಿಸುವ ಔಷಧಿಯನ್ನು ಅನಗತ್ಯವಾಗಿ ನೀಡಬಾರದು ಎಂದರು.

Advertisement

ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗಿಲ್ಲ. ಈ ಕುರಿತು ಪ್ರತಿಪಕ್ಷ ನಾಯಕರಿಗೆ ಮನವರಿಕೆ ಮಾಡಲಾಗುವುದು ಎಂದರು.

ಡೆಂಘೀ ತಡೆಗಟ್ಟಿ :

ಸೊಳ್ಳೆಯಿಂದ ಹರಡುವ ಡೆಂಘೀ ರೋಗ ರಾಜ್ಯದಲ್ಲಿ ಪ್ರತಿ ವರ್ಷ 15 ರಿಂದ 20 ಸಾವಿರ ಜನರಿಗೆ ಬರುತ್ತಿದೆ. ಮುಂಗಾರು ಆರಂಭವಾಗುತ್ತಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆ ಹುಟ್ಟದಂತೆ ಜನರು ಕ್ರಮ ವಹಿಸಬೇಕು. ನೀರು ಸಂಗ್ರಹವಾಗುವ ಕಡೆಗಳಲ್ಲಿ ಎಚ್ಚರ ವಹಿಸಬೇಕು. ಒಂದು ವಾರ ಬಿಟ್ಟರೆ ಸೊಳ್ಳೆಗಳು ಹುಟ್ಟಿ ರೋಗ ಹರಡುತ್ತದೆ. ಈ ಸೊಳ್ಳೆ ಹಗಲಿನಲ್ಲಿ ಹೆಚ್ಚಾಗಿ ಕಚ್ಚಿ ವೈರಾಣು ಹರಡುತ್ತದೆ. ಮಹಿಳೆಯರು ಮತ್ತು ಮಕ್ಕಳ ವಿಚಾರದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಯಾವುದೇ ರೀತಿ ಜ್ವರ, ಮೈ ಕೈ ನೋವು, ವಾಂತಿ, ಸ್ನಾಯುಸೆಳೆತ ಕಂಡುಬರುವುದು ಡೆಂಘೀ ಲಕ್ಷಣಗಳು. ಯಾವುದೇ ರೋಗ ಲಕ್ಷಣ ಕಂಡುಬಂದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next