ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವಂತೆಯೇ, ಇತ್ತೀಚೆಗೆ ಸಂಸತ್ತಿನಲ್ಲಿ ಮುಸ್ಲಿಂ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಸಂಸದ ರಮೇಶ್ ಬಿಧುರಿಗೆ ಚುನಾವಣೆಯ ಹೊಣೆಗಾರಿಕೆ ನೀಡಲಾಗಿದೆ.
ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಟೊಂಕ್ ಜಿಲ್ಲೆಯ ಜವಾಬ್ದಾರಿಯನ್ನು ರಮೇಶ್ ಬಿಧುರಿಗೆ ವಹಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟೊಂಕ್ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಏತನ್ಮಧ್ಯೆ, ರಮೇಶ್ ಬಿಧುರಿ ಅವರನ್ನು ಟೊಂಕ್ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಿದ್ದಕ್ಕಾಗಿ ಟಿಎಂಸಿ ಮತ್ತು ಕಾಂಗ್ರೆಸ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ರಮೇಶ್ ಬಿಧುರಿ ಮತ್ತು ಸಚಿನ್ ಪೈಲಟ್ ಇಬ್ಬರು ಗುರ್ಜರ್ ಸಮುದಾಯದಿಂದ ಬಂದವರು ಹಾಗೆಯೇ ಈ ಕ್ಷೇತ್ರದಲ್ಲಿ ಗುರ್ಜರ್ ಸಮುದಾಯ ಪ್ರಬಲವಾಗಿದ್ದು, ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರವಾಗಿದ್ದು, ಚುನಾವಣೆಗೆ ಈಗಿನಿಂದಲೇ ಬಿಜೆಪಿ ತಯಾರಿ ಆರಂಭಿಸಿದೆ.
2013ರಲ್ಲಿ ಬಿಜೆಪಿಯ ಅಜಿತ್ ಸಿಂಗ್ ಮೆಹ್ತಾ ಗೆದ್ದಿದ್ದರು. 1993ರಲ್ಲಿ ಬಿಜೆಪಿಯ ಮಹಾವೀರ್ ಪ್ರಸಾದ್ ಅವರು ಕೊನೆಯ ಬಾರಿಗೆ ಶಾಸಕರಾಗಿದ್ದರು. ಬಿಧುರಿ ಅವರು ಜೈಪುರದಲ್ಲಿ ಬಿಜೆಪಿಯ ರಾಜ್ಯ ಮುಖ್ಯಸ್ಥ ಸಿಪಿ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.