Advertisement
ಎಲ್ಲವೂ ಸದ್ಯ ಸಾರ್ವತ್ರಿಕ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರಾವಧಿಯೂ ಪೂರ್ಣಗೊಂಡಿದ್ದು, ಹೊಸ ರಾಷ್ಟ್ರೀಯ ಅಧ್ಯಕ್ಷರ ನೇಮಕ ಸೇರಿದಂತೆ ನಾನಾ ಹಂತದ ಪದಾಧಿಕಾರಿಗಳ ಬದಲಾವಣೆಯೂ ಆಗಬೇಕಿದೆ. ಹಾಗಾಗಿ, ಇದೊಂದು ರಾಷ್ಟ್ರೀಯ ಮಟ್ಟದ ಪ್ರಕ್ರಿಯೆ ಎನಿಸಿದೆ. ಕೇಂದ್ರದಲ್ಲಿ ಸರ್ಕಾರ ರಚನೆ ಬಳಿಕವಷ್ಟೇ ಉಳಿದ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಮೂಲಗಳು ಹೇಳಿವೆ.
Related Articles
Advertisement
ರಾಷ್ಟ್ರೀಯ ಪ್ರಕ್ರಿಯೆ: ಮೂರು ವರ್ಷದ ಹಿಂದೆ ಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿ ಯಡಿಯೂರಪ್ಪ ಅವರು ಆಯ್ಕೆಯಾದ ಸಂದರ್ಭದಲ್ಲೇ ಇತರ ನಾಲ್ಕು ರಾಜ್ಯಗಳ ಬಿಜೆಪಿ ಅಧ್ಯಕ್ಷರ ನೇಮಕವೂ ನಡೆದಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎರಡು ಅವಧಿಗೆ ಅಂದರೆ, ಆರು ವರ್ಷಗಳ ಅಧಿಕಾರಾವಧಿ ಪೂರ್ಣಗೊಳಿಸಿದ್ದಾರೆ. ಹಾಗಾಗಿ, ರಾಷ್ಟ್ರೀಯ ಅಧ್ಯಕ್ಷರು ಬದಲಾಗಬೇಕಿದೆ.
ಬಳಿಕ ನಿಯಮಾನುಸಾರ ಕೇಂದ್ರ ಚುನಾವಣಾ ಸಮಿತಿ, ಸಂಸದೀಯ ಮಂಡಳಿ, ಇತರ ಪದಾಧಿಕಾರಿಗಳ ಬದಲಾವಣೆ ಪ್ರಕ್ರಿಯೆಯೂ ನಡೆಯಲಿದೆ. ಹಾಗಾಗಿ, ಇದೊಂದು ರಾಷ್ಟ್ರೀಯ ಪ್ರಕ್ರಿಯೆಯಾಗಿದ್ದು, ಕಾಲಾವಕಾಶ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್‌ನಲ್ಲಿ ಆಯ್ಕೆ ಪ್ರಕ್ರಿಯೆ ಸಾಧ್ಯತೆ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ತಕ್ಷಣ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆ ಕಡಿಮೆ. ಏಕೆಂದರೆ ಕೇಂದ್ರದಲ್ಲಿ ಸರ್ಕಾರ ರಚನೆ ಮೊದಲ ಆದ್ಯತೆಯಾಗಲಿದೆ. ನಿಯಮಾನುಸಾರ ಪ್ರಕ್ರಿಯೆಗಳೆಲ್ಲಾ ನಡೆದು ಸರ್ಕಾರ ರಚನೆಗೆ ಒಂದಿಷ್ಟು ದಿನ ಬೇಕಾಗಲಿದೆ. ಅಲ್ಲಿ ರಚನೆಯಾಗುವ ಸರ್ಕಾರದ ಆಧಾರದ ಮೇಲೆ ಇತರ ಬೆಳವಣಿಗೆಗಳು ಆಗಲಿವೆ. ಮೊದಲಿಗೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ಆನಂತರ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ ಕೆಲ ಬದಲಾವಣೆಗಳಾಗಲಿದ್ದು, ಬಳಿಕ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಪಕ್ಷದ ಸಂವಿಧಾನದ ಪ್ರಕಾರವೇ ಎಲ್ಲ ಪ್ರಕ್ರಿಯೆಗಳು ನಡೆಯಬೇಕಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ ಕಾರ್ಯ ಆಗಸ್ಟ್‌ನಲ್ಲಿ ನಡೆಯುವ ಸಾಧ್ಯತೆ ಹೆಚ್ಚು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
300 ಸ್ಥಾನ ಗೆದ್ದರೆ ಭಾರೀ ಬದಲಾವಣೆ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂಘಟನೆ ದೃಷ್ಟಿಯಿಂದ ಭಾರೀ ಬದಲಾವಣೆಗಳಾಗಲಿವೆ. ಭವಿಷ್ಯದಲ್ಲಿ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಹಾಗೂ ದೇಶಾದ್ಯಂತ ಬಿಜೆಪಿಯನ್ನು ತಳಮಟ್ಟದಿಂದ ಇನ್ನಷ್ಟು ಸದೃಢವಾಗಿ ಸಂಘಟಿಸುವ ಉದ್ದೇಶದಿಂದ ಮಹತ್ತರ ಬದಲಾವಣೆಗಳಾಗಲಿವೆ.
ಮುಖ್ಯವಾಗಿ ಯುವ ಮುಖಂಡರು, ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಇದೆ. ಯುವ ನಾಯಕತ್ವ ಆಧಾರಿತವಾಗಿ ಸಂಘಟನೆ ಬೆಳೆಸುವ ಪ್ರಕ್ರಿಯೆಗಳಾಗಲಿವೆ. ಹಾಗಾಗಿ, ಚುನಾವಣಾ ಫಲಿತಾಂಶವು ದೇಶದಲ್ಲಿ ಮಾತ್ರವಲ್ಲದೆ ಪಕ್ಷದಲ್ಲೂ ಹೊಸ ಬದಲಾವಣೆ ತರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕ್ಷೇತ್ರದ ಉನ್ನತ ನಾಯಕರೊಬ್ಬರು ತಿಳಿಸಿದ್ದಾರೆ.
* ಎಂ. ಕೀರ್ತಿಪ್ರಸಾದ್