Advertisement

ಆಪರೇಷನ್‌ ಕಮಲಕ್ಕೆ ಮತ್ತೆ ಬಿಜೆಪಿ ಸಜ್ಜು

11:36 AM Mar 28, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೂ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ 125 ರಿಂದ 130 ಅಭ್ಯರ್ಥಿಗಳ ಪಟ್ಟಿ ಏಪ್ರಿಲ್‌ ಮೊದಲ ವಾರದೊಳಗೆ ಪ್ರಕಟವಾಗುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ಬಿಜೆಪಿ ಹಾಗೂ ಆರ್‌ಎಸ್‌ಎಸ್‌, ರಾಜ್ಯ ಬಿಜೆಪಿ ಹಾಗೂ ಖಾಸಗಿ ಸಂಸ್ಥೆಯಿಂದ ಅಭ್ಯರ್ಥಿಗಳ ಬಗ್ಗೆ ನಡೆಸಿರುವ ಸಮೀಕ್ಷೆಗಳ ವರದಿ ಮುಂದಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

Advertisement

ಏಪ್ರಿಲ್‌ 5,6 ಹಾಗೂ 7 ರಂದು ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದ್ದು ಆಗ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲೇ  ಆಕಾಂಕ್ಷಿಗಳ ನೇರ ಸಂದರ್ಶನವೂ ನಡೆಯಲಿದೆ. ಗೆಲ್ಲಲು ಯಾವ ಕಾರ್ಯತಂತ್ರ ರೂಪಿಸಲಾಗುವುದು. ಆಯಾ ಕ್ಷೇತ್ರದಲ್ಲಿ ಇತರೆ ಪ್ರತಿಪಕ್ಷಗಳ ಬಲ ಮತ್ತು ಸ್ಪರ್ಧೆ ಮಾಡಬಹುದಾದ ಅಭ್ಯರ್ಥಿಗಳ ಶಕ್ತಿ, ಯಾರಿಗೆ ಟಿಕೆಟ್‌ ಸಿಗಬಹುದು,

ಆದರಿಂದ ಬಿಜೆಪಿ ಮೇಲಾಗುವ ಪರಿಣಾಮಗಳೇನು ಎಂಬಿತ್ಯಾದಿ ಪ್ರಶ್ನೆಗಳನ್ನು ನೇರವಾಗಿ ಕೇಳಿ ಸಮರ್ಥವಾಗಿ ಉತ್ತರ ಬಂದ ನಂತರವೇ ಟಿಕೆಟ್‌ ಪಕ್ಕಾ ಆಗಲಿದೆೆ ಎಂದು ಹೇಳಲಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂಪೂರ್ಣ ಜವಾಬ್ದಾರಿ ಅಮಿತ್‌ ಶಾ ಅವರೇ ನೋಡಿಕೊಳ್ಳಲಿದ್ದು  ರಾಜ್ಯಾಧ್ಯಕ್ಷರು, ಚುನಾವಣಾ ಹಾಗೂ ರಾಜ್ಯ ಉಸ್ತುವಾರಿ, ಕೇಂದ್ರ ಸಚಿವರು ತಮ್ಮ ಅಭಿಪ್ರಾಯ ತಿಳಿಸಬಹುದಷ್ಟೇ ಎನ್ನಲಾಗಿದೆ.

ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಹೆಚ್ಚು ತಿರುಗಾಡಿಸದಿರಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದು, ಅಗತ್ಯ ಮತ್ತು ಅನಿವಾರ್ಯತೆ ಇರುವ ಕ್ಷೇತ್ರಗಳಲ್ಲಿ ಮಾತ್ರ ಕಳುಹಿಸಲು ನಿರ್ಧರಿಸಲಾಗಿದೆ. ಉಳಿದಂತೆ ಸ್ಥಳೀಯವಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸುವ ಹೊಣೆಗಾರಿಕೆ ನೀಡಲಾಗಿದೆ.

ಇನ್ಮುಂದೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಫ‌ಲಿತಾಂಶ ಬರುವುವವರೆಗೂ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಕಾರ್ಯವೈಖರಿ, ಸಮಾವೇಶ ಎಲ್ಲವೂ ಅಮಿತ್‌ ಶಾ ನಿರ್ದೇಶನದಂತೆಯೇ ನಡೆಯಲಿದೆ ಎಂದು ಹೇಳಲಾಗಿದೆ. 

Advertisement

“ಆಪರೇಷನ್‌ ಕಮಲ’ಕ್ಕೆ ಕಾರ್ಯತಂತ್ರ: ಇದರ ನಡುವೆಯೇ “ಆಪರೇಷನ್‌ ಕಮಲ’ ಕಾರ್ಯಾಚರಣೆಗೂ ಕಾರ್ಯತಂತ್ರ ರೂಪಿಸಿದ್ದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಸ್ವ ಸಾಮರ್ಥ್ಯದ ಮೇಲೆ ಗೆಲ್ಲಬಲ್ಲ 20 ಅಭ್ಯರ್ಥಿಗಳಿಗೆ ಗಾಳ ಹಾಕಲು ತೀರ್ಮಾನಿಸಲಾಗಿದೆ. ಆ ಪೈಕಿ ವಿಜಯನಗರ ಹಾಗೂ ಗೋವಿಂದರಾಜನಗರದ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾದ ಎಂ.ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ , ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ ಅವರ ಹೆಸರು ಸೇರಿದೆ.

ಎಸ್‌.ಎಂ.ಕೃಷ್ಣ ಹಾಗೂ ಇತ್ತೀಚೆಗೆ ಪಕ್ಷಕ್ಕೆ ಬಂದಿರುವ ಸಿ.ಪಿ.ಯೋಗೇಶ್ವರ್‌ ಮೂಲಕ ಕಾಂಗ್ರೆಸ್‌ನ ಮತ್ತಷ್ಟು ನಾಯಕರನ್ನು ಸೆಳೆಯಲು ತಂತ್ರ ರೂಪಿಸಲಾಗಿದ್ದು ಈಗಾಗಲೇ ಹಲವರು ಸಂಪರ್ಕದಲ್ಲಿ ಇದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಕಾಂಗ್ರೆಸ್‌ ಜತೆ ಗುರುತಿಸಿಕೊಂಡವರಲ್ಲೂ  ಕೆಲವರು ಬಿಜೆಪಿಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಬಿಎಸ್‌ವೈ, ಈಶ್ವರಪ್ಪಗೆ ಮಾತ್ರನಾ?: ಹಾಲಿ ಸಂಸದರ ಪೈಕಿ ಬಿ.ಎಸ್‌.ಯಡಿಯೂರಪ್ಪ, ಹಾಲಿ ವಿಧಾನಪರಿಷತ್‌ ಸದಸ್ಯರ ಪೈಕಿ ಕೆ.ಎಸ್‌. ಈಶ್ವರಪ್ಪ, ವಿ.ಸೋಮಣ್ಣ ಅವರ ಹೆಸರು ಮಾತ್ರ ಟಿಕೆಟ್‌ ನೀಡಬಹುದು ಎಂಬುವರ  ಪಟ್ಟಿಯಲ್ಲಿದೆ. ಉಳಿದಂತೆ ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು ಪ್ರತಾಪ್‌ಸಿಂಹ, ಪಿ.ಸಿ.ಮೋಹನ್‌ ಟಿಕೆಟ್‌ ಕೊಟ್ಟರೆ ಸ್ಪರ್ಧೆ ಮಾಡುವ ಇಂಗಿತ ಹೊಂದಿದ್ದು ಜತೆಗೆ ಪರಿಷತ್‌ ಸದಸ್ಯರಾದ ಮೋಹನ್‌ ಲಿಂಬಿಕಾಯಿ, ಬೇವಿನಮರದ, ರಘುನಾಥರಾವ್‌ ಮಲ್ಕಾಪುರೆ ಆಕಾಂಕ್ಷಿಗಳಾಗಿದ್ದಾರೆ.

ಆದರೆ, ಕೇಂದ್ರದ ವರಿಷ್ಠರು 2019 ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡಿರುವುದರಿಂದ ಬಯಸಿದದವರಿಗೆಲ್ಲಾ ಟಿಕೆಟ್‌ ಸಿಗುವುದು ಕಷ್ಟ. ಬಹುತೇಕ ಯಡಿಯೂರಪ್ಪ ಹಾಗೂ  ಈಶ್ವರಪ್ಪ ಅವರಿಗೆ ಮಾತ್ರ ಟಿಕೆಟ್‌ ಎಂದು ಹೈಕಮಾಂಡ್‌ನಿಂದಲೇ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ. ವಿ.ಸೋಮಣ್ಣ ಅವರ ಬದಲಿಗೆ ಅವರ ಪುತ್ರನಿಗೆ ಅರಸೀಕೆರೆಯಲ್ಲಿ ಟಿಕೆಟ್‌ ಕೊಟ್ಟು ಸುಮ್ಮನಾಗಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

* ಎಸ್‌.ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next