Advertisement

ವರ್ಷಾಂತ್ಯ ಬಿಜೆಪಿಗೆ “ಮೇಜರ್‌ ಸರ್ಜರಿ’

06:00 AM Nov 03, 2018 | |

ಬೆಂಗಳೂರು: ರಾಜ್ಯ ಬಿಜೆಪಿಗೆ ರಾಷ್ಟ್ರೀಯ ನಾಯಕರೇ “ಮೇಜರ್‌ ಸರ್ಜರಿ’ ನಡೆಸುವ ಸಾಧ್ಯತೆ ಇದೆ! ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಹುರುಪಿನಲ್ಲೇ ಸಿದ್ಧತೆ ನಡೆಸಿದ್ದ ಬಿಜೆಪಿಗೆ ಉಪಚುನಾವಣೆ ಫ‌ಲಿ ತಾಂಶಕ್ಕೂ ಮುನ್ನವೇ ಕಾಂಗ್ರೆಸ್‌ ಭಾರೀ “ಶಾಕ್‌’ ನೀಡಿರುವುದು ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಸ್ಪಷ್ಟ ಬಹುಮತ ಪಡೆಯಲಾಗದಿದ್ದರೂ ಅನಂತರ ಸರಕಾರ ರಚನೆಗೆ ನಡೆಸಿದ ಕಸರತ್ತುಗಳೆಲ್ಲ ಕೈಗೂಡದೆ ಸರಣಿ ವೈಫ‌ಲ್ಯಗಳಿಂದ ಬಿಜೆಪಿ ಕಂಗೆಟ್ಟಿತ್ತು. ಈಗ ರಾಮನಗರ ಉಪ ಚುನಾವಣ ಕಣದಿಂದ ಬಿಜೆಪಿ ಅಭ್ಯರ್ಥಿಯೇ ಹಿಂದೆ ಸರಿದು ಭಾರೀ ಮುಖಭಂಗಕ್ಕೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಗೆ ರಾಷ್ಟ್ರೀಯ ನಾಯಕರೇ ಡಿಸೆಂಬರ್‌ನಲ್ಲಿ “ಮೇಜರ್‌ ಸರ್ಜರಿ’ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದೊಳಗೆ ವಿಶ್ಲೇಷಿಸಲಾಗುತ್ತಿದೆ. 

Advertisement

ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಅನಿರೀಕ್ಷಿತವಾಗಿದ್ದರೂ ಜಮಖಂಡಿ ಹಾಗೂ ರಾಮನಗರ ವಿಧಾನಸಭೆ ಉಪಚುನಾವಣೆ ನಿರೀಕ್ಷಿತವೇ ಆಗಿತ್ತು. ಈ ಎರಡು ಕ್ಷೇತ್ರಗಳಲ್ಲಿ ಗೆದ್ದು ಮೈತ್ರಿ ಸರಕಾರಕ್ಕೆ ಜನಾದೇಶವಿಲ್ಲ ಎಂಬುದನ್ನು ಸಾರಿ ಹೇಳುವುದು ಬಿಜೆಪಿ ಉದ್ದೇಶವಾಗಿತ್ತು. ಆದರೆ ರಾಮನಗರ ಉಪಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣೆ ನಿರ್ವಹಣೆವರೆಗೂ ಹಲವು ಲೋಪಗಳಾಗಿದ್ದು, ಅದಕ್ಕೆಲ್ಲ ಮತದಾನಕ್ಕೂ ಮೊದಲೇ ಪಕ್ಷ ಬೆಲೆ ತೆತ್ತಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.

ಶಿವಮೊಗ್ಗ, ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ರಾಜ್ಯ ಬಿಜೆಪಿ ಕೋರ್‌ ಕಮಿಟಿಯಲ್ಲೇ ಚರ್ಚಿಸಿ ಅಂತಿಮಗೊಳಿಸಲಾಗಿತ್ತು. ಆದರೆ ರಾಮನಗರ ಹಾಗೂ ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿ ಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಹಿಸಲಾಗಿತ್ತು. ಅನಂತರ ನಡೆದ ಪ್ರಕ್ರಿಯೆಗಳು ಸರಿಯಾಗಿರಲಿಲ್ಲ ಎನ್ನುತ್ತವೆ ಬಿಜೆಪಿ ಮೂಲಗಳು.

ಮೊದಲೇ ಎಚ್ಚರಿಕೆ ನೀಡಿದ್ದರು!
ಕಾಂಗ್ರೆಸಿಗ ಸಿ.ಎಂ.ಲಿಂಗಪ್ಪ ಪುತ್ರ ಚಂದ್ರಶೇಖರ್‌ ಆಯ್ಕೆ ಬಗ್ಗೆ ಪಕ್ಷದಲ್ಲಿ ಹೆಚ್ಚಿನ ಚರ್ಚೆಯೇ ನಡೆದಿರಲಿಲ್ಲ. ಅಲ್ಲದೆ, ಸಚಿವ ಡಿ. ಕೆ. ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಆಣತಿಯಂತೆ ನಡೆಯುವ ಚಂದ್ರಶೇಖರ್‌ ಅವರನ್ನು ಕಣಕ್ಕಿಳಿಸಿದರೆ ಯಾವುದೇ ಸಂದರ್ಭದಲ್ಲಿ ಕೈ ಕೊಡಬಹುದು ಎಂಬ ಬಗ್ಗೆ ಸ್ಥಳೀಯ ಮುಖಂಡರು ಎಚ್ಚರಿಕೆ ನೀಡಿದ್ದರು. 

ಸದ್ಯದಲ್ಲೇ ವರಿಷ್ಠರಿಗೆ ವರದಿ
ರಾಮನಗರದ ಬೆಳವಣಿಗೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹಿರಿಯ ನಾಯಕರೊಂದಿಗೆ ಮೊಬೈಲ್‌ನಲ್ಲಿ ಮಾತುಕತೆ ನಡೆಸಿ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

Advertisement

 ಎಂ. ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next