ರಾಯಚೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಏನು ಕೊಟ್ಟಿದೆ ಎಂದು ಅವರು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾತ್ರೆಯಲ್ಲಿ ಅಚ್ಛೆ ದಿನ್ ಯಾರಿಗೆ ಬಂದಿದೆ ಎಂಬುದನ್ನು ತಿಳಿಸಲಿ. ಸಿಎಂ, ಕೇಂದ್ರ ಸಚಿವರನ್ನು ಏಕೆ ಕೈ ಬಿಟ್ಟಿದ್ದು ಎಂಬುದನ್ನು ತಿಳಿಸಲಿ. ಬೆಡ್ ಹಗರಣದ ಬಗ್ಗೆ ಮಾತನಾಡಿದ್ದು ಏಕೆ ಎಂದು ತಿಳಿಸಲಿ. 20 ಲಕ್ಷ ಕೋಟಿ ಪ್ಯಾಕೇಜ್ ಏನಾಯಿತು. ಕೋವಿಡ್‌ನಿಂದ 4 ಲಕ್ಷ ಜನ ಮೃತಪಟ್ಟರೆ 37 ಸಾವಿರ ಜನ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳುತ್ತಾರೆ ಎಂದರು.
ಇದನ್ನೂ ಓದಿ:ತಾಲಿಬಾನ್ ಹಿಡಿತದಲ್ಲಿ ಅಫ್ಘಾನ್ : ಮಹತ್ವದ ಸಭೆ ನಡೆಸಿದ ಮೋದಿ
75ನೇ ಸ್ವಾತಂತ್ರ್ಯೋತ್ಸವನಿಮಿತ್ತ ಕಾಂಗ್ರೆಸ್‌ನಿಂದ ಇಡೀ ವರ್ಷ ಅಮೃತ ಮಹೋತ್ಸವ ಆಚರಿಸಲಾಗುವುದು. ಈ ವರ್ಷದಲ್ಲಿ ಪಕ್ಷ ಸಂಘಟನೆ ಹಾಗೂ ಹೋರಾಟಗಳಿಗೆ ಆದ್ಯತೆ ನೀಡಲಾಗುವುದು. ಪ್ರತಿ ತಿಂಗಳು ಒಂದೊಂದು ಹೆಸರಿನಲ್ಲಿ ಜನರ ಬಳಿ ಹೋಗಲಾಗುವುದು. ಸೆಪ್ಟೆಂಬರ್‌ನಲ್ಲಿ ಸ್ವಾತಂತ್ರ್ಯಹೋರಾಟಗಾರರ ಕುಟುಂಬಗಳಿಗೆ ಕಾರ್ಯಕರ್ತರು ಭೇಟಿ ನೀಡಿದರೆ, ಅಕ್ಟೋಬರ್‌ನಲ್ಲಿ ಮಹಾತ್ಮ ಗಾಂಧಿಧೀಜಿ ಆಶಯದಂತೆ ಗ್ರಾಮಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುವುದು. ಈ ತಿಂಗಳೊಳಗೆ ಪಂಚಾಯಿತಿ ಪ್ರತಿನಿಧಿ ಸಭೆ ನಡೆಸುವಂತೆ ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸುಳ್ಳು, ಜನರಲ್ಲಿದ್ದ ಭ್ರಮೆ ಹಾಗೂ ಬಿಜೆಪಿ ಮಾಡಿದ ಮೋಸದಿಂದ ಕಾಂಗ್ರೆಸ್‌ಗೆ ಸೋಲಾಯಿತು. ಆದರೆ, ಈಗ ದೇಶದ ಎಲ್ಲ ವಿಪಕ್ಷಗಳು ಒಗ್ಗೂಡಲಿದ್ದು, ಶೀಘ್ರವೇ ಸಭೆ ನಡೆಸಿ ಮುಂದಿನ ಚುನಾವಣೆ ಕುರಿತು ನಿರ್ಧಾರ ಪ್ರಕಟಿಸಲಾಗುವುದು.
-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ರಾಜ್ಯ ಉಸ್ತುವಾರಿ