ಹೊಸದಿಲ್ಲಿ : ಭಾರತೀಯ ಜನತಾ ಪಕ್ಷದ ಚುನಾವಣಾ ಯಶಸ್ಸಿಗೆ ಅನುಗುಣವಾಗಿ ಅದರ ಆದಾಯ 2015-16 ಮತ್ತು 2016-17ರಲ್ಲಿ ಶೇ.81.18ರ ಏರಿಕೆಯನ್ನು ಕಂಡಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ಆದಾಯದಲ್ಲಿ ಶೇ.14ರ ಕುಸಿತ ದಾಖಲಾಗಿದೆ.
ದೇಶದಲ್ಲಿ ರಾಜಕೀಯ ಮತ್ತು ಚುನಾವಣಾ ಸುಧಾರಣೆಗಳಿಗಾಗಿ ಶ್ರಮಿಸುತ್ತಿರುವ ಅಸೋಸಿಯೇಶನ್ ಫಾರ್ ಡೆಮೋಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸರಕಾರೇತರ ಸೇವಾ ಸಂಘಟನೆಯ (ಎನ್‌ಜಿಓ) ವರದಿ ಪ್ರಕಾರ ಬಿಜೆಪಿ, ಚುನಾವಣಾ ಆಯೋಗದ ಮುಂದೆ ತನ್ನ ಆದಾಯ 1,034.27 ಕೋಟಿ ರೂ. ಎಂದು ಘೋಷಿಸಿಕೊಂಡಿದೆ. ಈ ಹಿಂದಿನ ಘೋಷಣೆಗಿಂತ ಇದು 463.41 ಕೋಟಿ ರೂ. ಜಾಸ್ತಿ ಇದೆ.
2016-17ರಲ್ಲಿ ತಾನು 710.057 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಬಿಜೆಪಿ ಘೋಷಿಸಿಕೊಂಡಿದೆ.
ಈ ಅವಧಿಯಲ್ಲಿ ಕಾಂಗ್ರೆಸ್ ಮಾಡಿರುವ ಖರ್ಚು 321.66 ಕೋಟಿ ರೂ. ಆದರೆ ಈ ಮೊತ್ತವು, ಅದರ ಈ ಅವಧಿಯ ಆದಾಯಕ್ಕಿಂತ 96.30 ಕೋಟಿ ರೂ. ಹೆಚ್ಚು ಎಂಬುದು ಗೊತ್ತಾಗಿದೆ.
ವರದಿ ತಿಳಿಸಿರುವ ಪ್ರಕಾರ ದೇಶದ ಇತರ 7 ರಾಷ್ಟ್ರೀಯ ರಾಜಕೀಯ ಪಕ್ಷಗಳ ಒಟ್ಟು ಆದಾಯ 1,559.17 ಕೋಟಿ ರೂ. ಖರ್ಚು 1,288.26 ಕೋಟಿ ರೂ. ಈ ಪಕ್ಷಗಳಿಗೆ ಸ್ವಯಂ ಪ್ರೇರಣೆಯಿಂದ ಬಂದಿರುವ ಒಟ್ಟು ವಂತಿಗೆ ಮೊತ್ತ 1,169.07 ಕೋಟಿ ರೂ. ಈ ಏಳು ಪಕ್ಷಗಳೆಂದರೆ ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ),ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸಿಸ್ಟ್ (ಸಿಪಿಐಎಂ), ಸಿಪಿಐ ಮತ್ತು ತೃಣಮೂಲ ಕಾಂಗ್ರೆಸ್.