ನವದೆಹಲಿ: ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಭಾರತೀಯ ಜನತಾ ಪಕ್ಷ ಗುಜರಾತ್ ನ ಸೂರತ್ ನಲ್ಲಿ ಚುನಾವಣೆಗೂ ಮುನ್ನವೇ ಖಾತೆ ತೆರೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಸೂರತ್ ಲೋಕಸಭಾ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಗೆಲುವು ಸಾಧಿಸಿರುವುದಾಗಿ ಘೋಷಿಸಲಾಗಿದೆ.
ಇದನ್ನೂ ಓದಿ:MaMataಗೆ ಮುಖಭಂಗ-25,000 ಶಿಕ್ಷಕರ ನೇಮಕಾತಿ ರದ್ದು, ಸಂಬಳ ಮರಳಿಸಿ: ಹೈಕೋರ್ಟ್
ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ರಿಟರ್ನಿಂಗ್ ಆಫೀಸರ್ ತಿರಸ್ಕರಿಸಿದ್ದು, ಉಳಿದ ಎಂಟು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುವುದಾಗಿ ವರದಿ ತಿಳಿಸಿದೆ. ಕಾಂಗ್ರೆಸ್ ಪಕ್ಷದ ನೀಲೇಶ್ ಕುಂಭಾನಿ ಸೂರತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ನಾಮಪತ್ರ ತಿರಸ್ಕೃತಗೊಂಡಿತ್ತು.
ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಡಮ್ಮಿ ಅಭ್ಯರ್ಥಿ ಸುರೇಶ್ ಪಡ್ಸಾಲಾ ಅವರ ನಾಮಪತ್ರ ಕೂಡಾ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಬಿಜೆಪಿಯ ದಲಾಲ್ ಅವಿರೋಧವಾಗಿ ಆಯ್ಕೆಯಾಗುವಂತಾಗಿದೆ ಎಂದು ವರದಿ ತಿಳಿಸಿದೆ.
ಗುಜರಾತ್ ನಲ್ಲಿ ಬಿಜೆಪಿ ದುರಾಡಳಿತ ನಡೆಸುತ್ತಿದ್ದು, ಕುಂಭಾನಿಯ ಮೂವರು ಅನುಮೋದಕರನ್ನು ಬಿಜೆಪಿ ಅಪಹರಿಸಿದ್ದು, ಈ ಬಗ್ಗೆ ರಿಟರ್ನಿಂಗ್ ಆಫೀಸರ್ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಬಾಬು ಮಂಗುಕಿಯಾ ತಿಳಿಸಿದ್ದಾರೆ.