Advertisement

ಬಿಜೆಪಿಯ ಡಬಲ್‌ ಅನುಕಂಪ ಅಸ್ತ್ರ

06:15 AM Oct 25, 2018 | |

ಬಾಗಲಕೋಟೆ: ಜಮಖಂಡಿ ಉಪ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಲವು ತಂತ್ರಗಾರಿಕೆ ಅನುಸರಿಸುತ್ತಿದೆ. ಬಿಜೆಪಿ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸಲು ಎರಡೆರಡು ಅನುಕಂಪದ ಅಸ್ತ್ರ ಬಳಸುತ್ತಿದೆ.

Advertisement

2013 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿರುವ ಅನುಕಂಪ ಪಡೆಯುತ್ತ ಈವರೆಗೆ ಪ್ರಚಾರ ನಡೆಸುತ್ತಿದ್ದ ಬಿಜೆಪಿ, ಬುಧವಾರ ಮತ್ತೂಂದು ಅನುಕಂಪದ ಅಸ್ತ್ರ ಪ್ರಯೋಗಿಸಿದೆ. ಮುಂದಿನ ಚುನಾವಣೆಗೆ ಶ್ರೀಕಾಂತ ಕುಲಕರ್ಣಿ ಸ್ಪರ್ಧಿಸಲ್ಲ ಎಂದು ಘೋಷಿಸಿ ದಾಳ ಉರುಳಿಸಿದ್ದಾರೆ.

ಕಾಂಗ್ರೆಸ್‌-ಬಿಜೆಪಿ ಎರಡೂ ಪಕ್ಷಗಳು ಅನುಕಂಪವನ್ನೇ ಪ್ರಚಾರದ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಬ್ಯಾರೇಜ್‌ ನಿರ್ಮಿಸಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಸಿದ್ದು ನ್ಯಾಮಗೌಡರ ಅಕಾಲಿಕ ನಿಧನದಿಂದ ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನ್ಯಾಮಗೌಡರ ಪುತ್ರ ಆನಂದ ನ್ಯಾಮಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಪ್ರಚಾರಕ್ಕೆ ಬಂದವರೆಲ್ಲ ಸಿದ್ದು ನ್ಯಾಮಗೌಡರನ್ನು ನೆನೆದು, ಅವರ ಪುತ್ರನ ಗೆಲ್ಲಿಸಲು ಮತ ಕೇಳುತ್ತಿದ್ದಾರೆ.ಕಾಂಗ್ರೆಸ್‌ನ ಈ ಅನುಕಂಪದ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಸಾರ್ವತ್ರಿಕ ಚುನಾವಣೆ ಸೋಲು ಮತ್ತು ಮುಂದಿನ ಬಾರಿ ಸ್ಫರ್ಧೆಯನ್ನೇ ಮಾಡುವುದಿಲ್ಲ, ಇದೊಂದು ಬಾರಿ ಗೆಲ್ಲಿಸಿ ಎಂದು ಮತಯಾಚನೆ ಮಾಡುತ್ತಿದ್ದಾರೆ.

ಸಂಗಮೇಶ ಬಲಕ್ಕೆ ಚಾಣಾಕ್ಷ ನಡೆ: ಉಪ ಚುನಾವಣೆಯಲ್ಲಿ ಗೆಲ್ಲಲು ತಮ್ಮ ಪಕ್ಷದಲ್ಲಿ ಭಿನ್ನಮತ ಶಮನಗೊಳಿಸುವ ಜತೆಗೆ ಮತಗಳ ವಿಭಜನೆ ತಡೆಯಲು ಪ್ರಭಾವಿ ಉದ್ಯಮಿ, ಎಂಆರ್‌ಎನ್‌ ಫೌಂಡೇಶನ್‌ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಸಂಗಮೇಶ ನಿರಾಣಿ ಬಲ ಪಡೆಯಲೂ ಬಿಜೆಪಿ ನಾಯಕರು ಚಾಣಾಕ್ಷತನ ಮೆರೆದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕುಲಕರ್ಣಿ ಕೇವಲ 2500 ಮತಗಳಿಂದ ಪರಾಭವಗೊಂಡಿದ್ದರೆ, ಸಂಗಮೇಶ 25 ಸಾವಿರ ಮತ ಪಡೆದಿದ್ದರು. ಆ ಮತಗಳೆಲ್ಲ ಬಿಜೆಪಿಯ ಪಾರಂಪರಿಕ ಮತಗಳಾಗಿದ್ದವು. ಹೀಗಾಗಿ ಉಪ ಚುನಾವಣೆಯಲ್ಲಿ ಸಂಗಮೇಶ ಬೆಂಬಲ ಪಡೆಯಲು ಕುಲಕರ್ಣಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.

ಸಂಗಮೇಶ ಮತ್ತು ಡಾ. ಮಹಾಬಲಶೆಟ್ಟಿ ಅವರ ಅಸಮಾಧಾನ ಪರಿಹಾರ ಸಂಧಾನ ಸಭೆಯಲ್ಲಿ, ಮುಂದಿನ ಚುನಾವಣೆಯಲ್ಲಿ ಕುಲಕರ್ಣಿ ಅವರ ಬದಲಿಗೆ ನಮಗೆ ಟಿಕೆಟ್‌ ಕೊಡಬೇಕು. ಅವರು ಸ್ಪರ್ಧೆ ಮಾಡಬಾರದು ಎಂಬ ಷರತ್ತು ಇಟ್ಟಿದ್ದರು. ಅವರು ಮುಂದಿನ ಬಾರಿ ಸ್ಪರ್ಧೆ ಮಾಡದಿದ್ದರೆ ನಾವು ಈಗ ಸಂಪೂರ್ಣ ಬೆಂಬಲ ಕೊಡುವ ಜತೆಗೆ ತನು-ಮನ-ಧನದಿಂದ ಗೆಲುವಿಗೆ ಶ್ರಮಿಸುವುದಾಗಿಯೂ ಹೇಳಿದ್ದರು. ಈ ಷರತ್ತಿಗೆ ಕುಲಕರ್ಣಿ ಅವರಿಂದಲೇ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಎಂಬ ಘೋಷಣೆಯನ್ನು ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಶ್ರೀಕಾಂತ ಕುಲಕರ್ಣಿ ಅವರಿಗೆ ಕ್ಷೇತ್ರದಲ್ಲಿ ಅನುಕಂಪವಿದೆ. ಖಂಡಿತವಾಗಿ ಉಪ ಚುನಾವಣೆಯಲ್ಲಿ ಅವರು ಗೆಲ್ಲಲಿದ್ದಾರೆ. ಕಳೆದ ಬಾರಿ ಬಂಡಾಯ ಎದ್ದಿದ್ದ ಸಂಗಮೇಶ ನಿರಾಣಿ ಕೂಡ ಈಗ ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ನಾನು ಎರಡು ಬಾರಿ ಅತೀ ಕಡಿಮೆ ಅಂತರದಿಂದ ಸೋತಿದ್ದೇನೆ. ಉಪ ಚುನಾವಣೆಯಲ್ಲಿ ನನಗೆ ಹಿರಿಯರು ಪಕ್ಷದ ಟಿಕೆಟ್‌ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಈ ಬಾರಿ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ಅಚಲವಾಗಿದೆ.
– ಶ್ರೀಕಾಂತ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next