ಹೊಸದಿಲ್ಲಿ : ಬಿಜೆಪಿಯ ಸಿ ಆರ್ ಪಾಟೀಲ್ ಅವರು ಗುಜರಾತ್‌ನ ನವಸಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು 6.89 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಅಂತರದ ವಿಜಯವನ್ನು ದಾಖಲಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರೀತಮ್ ಮುಂಢೆ ಅವರು ಮಹಾರಾಷ್ಟ್ರದ ಬೀಡ್ ಕ್ಷೇತ್ರದಲ್ಲಿ ದಾಖಲಿಸಿದ್ದ 6.96 ಮತಗಳ ಅಂತರದ ವಿಜಯವು ಈ ವರೆಗಿನ ಸಾರ್ವಕಾಲಿಕ ಬೃಹತ್ ಅಂತರದ ವಿಜಯವಾಗಿದ್ದು ಆ ದಾಖಲೆಯ ಅತ್ಯಂತ ಸನಿಹಕ್ಕೆ ಬರುವುದಷ್ಟೇ ಸಿ ಆರ್ ಪಾಟೀಲ್‌ಗೆ ಸಾಧ್ಯವಾಯಿತು.
ಇದಕ್ಕೆ ವ್ಯತಿರಿಕ್ತವಾಗಿ ಅತೀ ಕಡಿಮೆ ಅಂತರದ ವಿಜಯವನ್ನು ಕೂಡ ಬಿಜೆಪಿ ಅಭ್ಯರ್ಥಿಯೇ ಈ ಬಾರಿ ದಾಖಲಿಸಿರುವುದು ಗಮನಾರ್ಹವಾಗಿದೆ.
ಉತ್ತರ ಪ್ರದೇಶದ ಮಛಲೀಶಹರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭೋಲಾನಾಥ್ ಅವರು ಕೇವಲ 181 ಮತಗಳ ಅಂತರದಿಂದ ಜಯಿಸುವ ಮೂಲಕ ಅತೀ ಕಡಿಮೆ ಅಂತರದ ದಾಖಲೆಯ ವಿಜಯ ಗಳಿಸಿದರು.
ಪಾಟೀಲ್ ಅವರ ಹಾಗೆ 6 ಲಕ್ಷ + ಅಂತರದ ವಿಜಯ ದಾಖಲಿಸಿರುವ ಇತರ ಮೂವರು ಜೆಪಿ ಅಭ್ಯರ್ಥಿಗಳೆಂದರೆ ಸಂಜಯ್ ಭಾಟಿಯಾ, ಕೃಷನ್ ಪಾಲ್ ಮತ್ತು ಸುಭಾಷ್ ಚಂದ್ರ ಬಹೇರಿಯ.
ಬಿಜೆಪಿಯ ಇನ್ನೂ ಹನ್ನೆರಡು ಅಭ್ಯರ್ಥಿಗಳು ಐದು ಲಕ್ಷಕ್ಕೂ ಮೀರಿದ ಅಂತರದ ವಿಜಯವನ್ನು ದಾಖಲಿಸಿದ್ದಾರೆ.
ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಜಯದ ಅಂತರ 4.79 ಲಕ್ಷ ಮತಗಳು. ಅಮಿತ್ ಶಾ ದಾಖಲಿಸಿರುವ ವಿಜಯದ ಅಂತರ 5.57 ಲಕ್ಷ ಮತಗಳು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 541 ಸ್ಥಾನಗಳ ಪೈಕಿ 302 ಸ್ಥಾನಗಳನ್ನು ಗೆದ್ದು ಪ್ರಚಂಡ ವಿಜಯವನ್ನು ದಾಖಲಿಸಿದೆ.