Advertisement
ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದೇಶ ವಿವಿಧೆಡೆಗಳಲ್ಲಿ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಇದೇ ಮಾದರಿ ಅನುಷ್ಠಾನಗೊಳಿಸುವ ಸಾಧ್ಯತೆ ಇದ್ದು, ಇದು ಸಾಧ್ಯವಾದರೆ ಅದು ಕರ್ನಾಟಕ ಮಾದರಿ ಎಂದೇ ಹೆಸರಾಗಲಿದೆ.
Related Articles
Advertisement
ಮಾ.31ರಿಂದ ರಾಜ್ಯಾದ್ಯಂತ ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ಪದಾಧಿಕಾರಿಗಳಿಂದ ಮತದಾನ ನಡೆಯಲಿದೆ. ಕೆಲ ಜಿಲ್ಲೆಗಳಲ್ಲಿ ನಗರ-ಗ್ರಾಮೀಣ ಎಂಬ ಜಿಲ್ಲೆಗಳಿದ್ದು, ಅವುಗಳನ್ನು ವಿಲೀನಗೊಳಿಸಿ ಒಂದೇ ಕಡೆ ಮತದಾನ ನಡೆಸಲಾಗುತ್ತಿದ್ದು, ಇದರಿಂದ ಸುಮಾರು 34 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ವೀಕ್ಷಣೆ ಹಾಗೂ ಮೇಲುಸ್ತುವಾರಿಗೆ ಬಿಜೆಪಿ ರಾಜ್ಯಮಟ್ಟದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಚಿವರನ್ನು ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. ಮತದಾನ ಮುಗಿದ ಅನಂತರದಲ್ಲಿ ಸೀಲ್ ಆಗುವ ಮತ ಪೆಟ್ಟಿಗೆಯನ್ನು ಜಿಲ್ಲೆಗೆ ನಿಯೋಜನೆಗೊಂಡವರು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.
ಹೇಗೆ ನಡೆಯಲಿದೆ ಮತದಾನ?: ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಒಂದು ಜಿಲ್ಲೆಗೆ ಐದಾರು ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಆಯಾ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರಾಗಬೇಕೆಂದು ಪಕ್ಷದ ಪ್ರಮುಖ ಪದಾಧಿಕಾರಿಗಳ ಅನಿಸಿಕೆ ಸಂಗ್ರಹಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಪೆಟ್ಟಿಗೆ ಇರಿಸಲಾಗುತ್ತದೆ. ಬಿಜೆಪಿಯಲ್ಲಿ ಶಕ್ತಿ ಕೇಂದ್ರಗಳ ಮೇಲ್ಪಟ್ಟ ವಿವಿಧ ವಿಭಾಗಗಳ ಪದಾಧಿಕಾರಿಗಳು ತಮ್ಮ ಕ್ಷೇತ್ರದ ಅಭ್ಯರ್ಥಿಯಾರಾಗಬೇಕೆಂದು ನಿರ್ಧರಿಸುವ ಹಕ್ಕು ನೀಡಲಾಗುತ್ತದೆ. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಈ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಬಿಜೆಪಿಯ ಮಾತೃ ಘಟಕದ ಪದಾಧಿಕಾರಿಗಳು, ಮಹಿಳಾ, ರೈತ, ಅಲ್ಪಸಂಖ್ಯಾಕ, ಪರಿಶಿಷ್ಟ ಜಾತಿ-ಪಂಗಡ, ಯುವ ಮೋರ್ಚಾ, ಹಿಂದುಳಿದ, ಕಾರ್ಮಿಕ ಹೀಗೆ ವಿವಿಧ ಘಟಕಗಳ ಆಯಾ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ತಮ್ಮ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ಅವರ ಹೆಸರು ಬರೆದು ಮತ ಪೆಟ್ಟಿಗೆಗೆ ಹಾಕಬೇಕಿದೆ. ಪದಾಧಿಕಾರಿಗಳ ಮೇಲೂ ಪ್ರಭಾವ ಬೀರುವ ಇಲ್ಲವೆ ಹಾಲಿ ಶಾಸಕರು ತಮ್ಮದೇ ಶಕ್ತಿ ಪ್ರದರ್ಶಿಸುವುದಕ್ಕೆ ಅವಕಾಶ ನೀಡದಂತೆ ಬೇರೆ ಜಿಲ್ಲೆಯ ಪಕ್ಷದ ನಾಯಕರನ್ನು ಮೇಲುಸ್ತುವಾರಿಗೆ ನಿಯೋಜಿಸಲಾಗಿದೆ .
ಮೂರು ಹೆಸರುಗಳು ಶಿಫಾರಸು: ಮಾ.31ರಂದು ಆಯಾ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಯಾರೆಂಬುದರ ಬಗ್ಗೆ ಪಕ್ಷದ ಪದಾಧಿಕಾರಿಗಳಿಂದ ಮತದಾನ ನಡೆದ ಅನಂತರ ಮತ ಪೆಟ್ಟಿಗೆಗಳನ್ನು ಬೆಂಗಳೂರಿಗೆ ತಂದು ಅಲ್ಲಿಯೇ ತೆರೆಯಲಾಗುತ್ತದೆ. ಎ.1-2ರಂದು ಬೆಂಗಳೂರಿನಲ್ಲಿ ಜಿಲ್ಲಾ ಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿಯೂ ಅಭ್ಯರ್ಥಿ ಯಾರಾಗಬೇಕು ಎಂಬುದರ ಅನಿಸಿಕೆಗಳನ್ನು ಸಂಗ್ರಹಿಸಲಾಗುತ್ತದೆ. ಒಂದು ಜಿಲ್ಲೆಗೆ ಅರ್ಧ ತಾಸು ಸಮಯ ನೀಡುವ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ.
ರಾಜ್ಯಮಟ್ಟದ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಪದಾಧಿಕಾರಿಗಳ ಮತದಾನದ ಫಲಿತಾಂಶ ಸೇರಿದಂತೆ ಪಕ್ಷ ನಿಗದಿಪಡಿಸಿದ 10 ಅಂಶಗಳ ಮಾಹಿತಿ ಕ್ರೋಡೀಕರಿಸಲಾಗುತ್ತದೆ. ಒಂದು ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಕೇಂದ್ರ ಸಂಸದೀಯ ಮಂಡಳಿಗೆ ಶಿಫಾರಸು ಮಾಡಲಾಗುತ್ತದೆ. ಸಂಸದೀಯ ಮಂಡಳಿ ಸಭೆಯಲ್ಲಿ ಪ್ರತೀ ಕ್ಷೇತ್ರಕ್ಕೆ ಮೂವರಲ್ಲಿ ಒಬ್ಬರನ್ನು ಅಭ್ಯರ್ಥಿ ಯಾರೆಂಬುದನ್ನು ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.
ಎ.10 ವೇಳೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ?ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಸರ್ಕಸ್ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ಎ.10ರ ವೇಳೆಗೆ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಮತದಾನ ಸಹಿತ 10 ಅಂಶಗಳ ಪರಿಗಣನೆ ನಡುವೆಯೂ ಈಗಾಗಲೇ ಬಿಜೆಪಿ ಹೈಕಮಾಂಡ್ ಕೆಲ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ ಎಂದು ಹೇಳಲಾಗುತ್ತಿದೆ. -ಅಮರೇಗೌಡ ಗೋನವಾರ