ಬೆಂಗಳೂರು : ಬಿಜೆಪಿಯದ್ದು ಲಾಜಿಕ್ ಇಲ್ಲದ, ರಾಜಕೀಯ ಪ್ರೇರಿತ ಕರ್ಫ್ಯೂ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಮಿಕ್ರಾನ್ ಸಂಬಂಧಿಸಿದಂತೆ ಸರ್ಕಾರ ಸದುದ್ದೇಶದಿಂದ ಕೈಗೊಂಡ ನಿರ್ಧಾರಕ್ಕೆ ಎಲ್ಲರೂ ಬೆಂಬಲಿಸುತ್ತಾರೆ. ಆದರೆ ದುರುದ್ದೇಶದ ತೀರ್ಮಾನಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ. ಸರ್ಕಾರ ಈಗೆ ತೆಗೆದುಕೊಂಡಿರುವ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ ಡೌನ್ ಜನವಿರೋಧಿ ತೀರ್ಮಾನ ಎಂದು ಆರೋಪಿಸಿದರು.
ಕೋವಿಡ್ ಸಂಬಂಧಿಸಿದಂತೆ ಸರ್ಕಾರ ವಿಜ್ಞಾನದ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೇ ಹೊರತು, ರಾಜಕೀಯ ಮಾಡಬಾರದು. ಯಾವುದೇ ಲಾಕ್ ಡೌನ್ ಅಥವಾ ಕರ್ಫ್ಯೂ ತೀರ್ಮಾನ ತೆಗೆದುಕೊಳ್ಳುವಾಗ ಎಷ್ಟು ಪಾಸಿಟಿವ್ ಪ್ರಕರಣ ಬರುತ್ತದೆ, ಅದರಲ್ಲಿ ಶೇ.ರಷ್ಟು ಜನ ಆಕ್ಸಿಜನ್ ಬೆಡ್ ಅಥವಾ ಐಸಿಯುಗೆ ದಾಖಲಾದರೆ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾನದಂಡವಿದೆ.
ಲಾಕ್ ಡೌನ್, ಕರ್ಫ್ಯೂನಿಂದ ಒಮಿಕ್ರಾನ್ ನಿಯಂತ್ರಣ ಆಗುವುದಿಲ್ಲ, ಅದು ಕೇವಲ ಪೂರ್ವಸಿದ್ಧತೆಗೆ ಸಮಯ ಕಲ್ಪಿಸುತ್ತದೆ. ಈಗ ಪಾಸಿಟಿವ್ ದರ ಶೇ.3ರಷ್ಟಿದೆ. ಇದರಲ್ಲಿ ಆಕ್ಸಿಜನ್ ಹಾಗೂ ಐಸಿಯು ಬೆಡ್ ನಲ್ಲಿ ಹೆಚ್ಚಿನ ಜನ ಇಲ್ಲ. ಇಂದು 95%ರಷ್ಟು ಜನ ಪಾಸಿಟಿವ್ ಬಂದರೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬರುವ ಅಗತ್ಯವೇ ಇಲ್ಲವಾಗಿದೆ ಎಂದರು.
ಈ ಸಮಯದಲ್ಲಿ ಲಾಕ್ ಡೌನ್, ಕರ್ಫ್ಯೂ ತಂದು ಜನರ ಮೇಲೆ ಕಷ್ಟ ಹೇರುವ ಸರ್ಕಾರ ದ್ದೇಶ ಎಂತಹದ್ದು? ಎಂದು ಜನರಿಗೆ ತಿಳಿಸಬೇಕು. ನಾನು ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗುವುದಾದರೆ, ನೀವು ಈ ನಿರ್ಬಂಧ ಹಾಕುವ ಉದ್ದೇಶವೇನು? ಇದರಿಂದಾಗುವಆರ್ಥಿಕ ಹಾಗೂ ಸಾಮಾಜಿಕ ದುಷ್ಪರಿಣಾಮಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ನಮ್ಮ ದೇಹದಲ್ಲಿ ಲಾಕ್ ಡೌನ್, ಕರ್ಫ್ಯೂ ಮಾಡಬೇಕೇ ಹೊರತು ಹೊರಗಡೆ ಅಲ್ಲ. ಇದಕ್ಕಾಗಿ ಲಸಿಕೆ ಹೆಚ್ಚಾಗಿ ನೀಡಿ, ಬೂಸ್ಟರ್ ಡೋಸ್ ನೀಡುವ ಬಗ್ಗೆ ಯೋಚಿಸಿ, 18 ವರ್ಷ ಮೇಲ್ಪಟ್ಟವರಿಗೆ ಮೂರನೇ ಡೋಸ್ ಪಡೆಯಲು ಅನುಮತಿ ನೀಡಿ, ದೇಶದಲ್ಲಿ ದುಡಿಯುವ ಶಕ್ತಿ 18 ವರ್ಷ ಮೇಲ್ಪಟ್ಟವರು. ಅವರಿಗೆ ಯಾಕೆ ಲಸಿಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.