ಬೆಂಗಳೂರು: ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಕಿರಣ್‌ಕುಮಾರ್ ಹಾಗೂ ಚಿಕ್ಕಮಗಳೂರಿನ ತಮ್ಮಯ್ಯ ಸೇರಿ ಹಲವರು ಬಿಜೆಪಿ ತೊರೆದು ಕಾಂಗ್ರೆಸ್, ಜೆಡಿಎಸ್ ಸೇರ್ಪಡೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ ನಾಯಕರು ಈಗ “ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾಜಿ ಶಾಸಕರು ಹಾಗೂ ಸ್ಥಳೀಯವಾಗಿ ಪ್ರಭಾವವುಳ್ಳ ಮುಖಂಡರು ಪಕ್ಷ ತೊರೆಯಲು ಮುಂದಾಗಿರುವುದು ಚುನಾವಣಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಈಗ ಭವಿಷ್ಯದಲ್ಲಿ ಆಗುವ ಮತ್ತಷ್ಟು ಹಾನಿ ತಡೆಗೆ ಕಾರ್ಯೋನ್ಮುಖರಾಗಿದ್ದಾರೆ. ಯಾವುದೇ ಕಾರಣದಿಂದಲೂ ಸ್ಥಳೀಯ ಪ್ರಭಾವಿ ಮುಖಂಡರನ್ನು ಈ ಹೊತ್ತಿನಲ್ಲಿ ಕಳೆದುಕೊಳ್ಳಬಾರದು ಎಂಬುದು ಪಕ್ಷದ ನಾಯಕರ ಒಮ್ಮತದ ಅಭಿಪ್ರಾಯವಾಗಿದೆ.
ಹೀಗಾಗಿ ಸ್ಥಳೀಯ ಶಾಸಕರು ಹಾಗೂ ಸಚಿವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಮುಖಂಡರನ್ನು ಸ್ಥಳೀಯವಾಗಿ ಸಮಾಧಾನಪಡಿಸಿ ಉಳಿಸಿಕೊಳ್ಳುವ ಪ್ರಯತ್ನಗಳು ಆರಂಭವಾಗಿವೆ. ಪ್ರಮುಖ ಮುಖಂಡರು ಸ್ಥಳೀಯವಾಗಿ ಜಾತಿ ಇಲ್ಲವೇ ಮತ್ತೊಂದು ಕಾರಣಕ್ಕೆ ತಮ್ಮದೇ ಪ್ರಭಾವ ಹೊಂದಿರುವುದರಿಂದ ಅಂತಹವರು ಪಕ್ಷ ತ್ಯಜಿಸಿದರೆ ಸುಲಭವಾಗಿ ಗೆಲ್ಲುವ ಕ್ಷೇತ್ರಗಳಲ್ಲಿ ಕಷ್ಟಪಡಬೇಕಾಗುತ್ತದೆ ಇಲ್ಲವೇ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಅಂತಹವರನ್ನು ಉಳಿಸಿಕೊಳ್ಳಲು ಎರಡೆರಡು ಜಿಲ್ಲೆಗಳಿಗೆ ಒಬ್ಬರಂತೆ ಸಚಿವರು ಇಲ್ಲವೇ ಪ್ರಮುಖ ನಾಯಕರನ್ನು ನಿಯೋಜಿಸುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಾಲಿ ಶಾಸಕರ ಪೈಕಿ ಯಾರೊಬ್ಬರೂ ಪಕ್ಷ ಬಿಡುವುದಿಲ್ಲವೆಂದು ಭಾವಿಸಿರುವ ಬಿಜೆಪಿ ನಾಯಕರಿಗೆ ಎಲ್ಲೋ ಒಂದು ಕಡೆ ಕೆಲವರ ಬಗ್ಗೆ ಅನುಮಾನವೂ ಇದೆ. ಅವರು ಸ್ಥಳೀಯವಾಗಿ ನಡೆದುಕೊಳ್ಳುತ್ತಿರುವ ರೀತಿ ಹಾಗೂ ಪ್ರತಿಪಕ್ಷಗಳೊಂದಿಗೆ ಸಂಬಂಧ ಹಾಗೂ ಸಂಪರ್ಕ ಇದಕ್ಕೆ ಸಾಕ್ಷಿಯಾಗಿದೆ. ಅಂತಹವರನ್ನು ಕರೆಸಿ ಪಕ್ಷದಲ್ಲಿ ಉಳಿಸಿಕೊಳ್ಳಬೇಕು, ಕೆಲವರಿಗೆ ಕೆಲವು ಕಾರಣಗಳಿಂದಲೇ ಟಿಕೆಟ್ ತಪ್ಪಿದರೂ ಅವರು ಪಕ್ಷ ಬಿಡದಂತೆ ಉಳಿಸಿಕೊಳ್ಳಬೇಕೆಂಬ ಎಚ್ಚರಿಕೆಯ ಹೆಜ್ಜೆಇಡಲು ನಿರ್ಧರಿಸಿದ್ದಾರೆ.