Advertisement

Congress ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನ ಬಿಜೆಪಿ ಮಾಡುವುದಿಲ್ಲ: ಪ್ರಹ್ಲಾದ ಜೋಶಿ

04:37 PM Nov 12, 2023 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಕ್ಕೆ ಯಾವ ಯತ್ನವನ್ನು ಬಿಜೆಪಿ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಐದು ವರ್ಷ ಆಡಳಿತ ಮಾಡಲಿ ಎಂಬುದು ನಮ್ಮ ಆಶಯ. ಆದರೆ, ಅವರ ಆಂತರಿಕ ಗೊಂದಲ, ಭಿನ್ನಾಭಿಪ್ರಾಯದಿಂದ ಸರ್ಕಾರ ಪತನಗೊಂಡರೆ ನಾವೇನು ಮಾಡಲಾಗದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ರವಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಯಾವ ಯತ್ನವನ್ನು ಮಾಡುತ್ತಿಲ್ಲ. ಸರ್ಕಾರ ಪತನಗೊಳ್ಳಲಿದೆ, ಕಾಂಗ್ರೆಸ್ಸಿನ ಕೆಲಸ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬಂತಹ ಹೇಳಿಕೆಗಳನ್ನು ಪಕ್ಷದ ಶಾಸಕರಾಗಲಿ, ಮುಖಂಡರಾಗಲಿ ನೀಡದಿರುವಂತೆ ಸೂಚಿಸಲು ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಿವೆ. ಈ ವಿಚಾರವಾಗಿ ಕೋರ್ ಕಮಿಟಿ ಸಭೆಯಲ್ಲೂ ಚರ್ಚಿಸಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಸ್ವತಃ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಗೊಂದಲ ಸೃಷ್ಟಿಗೆ ಮುಂದಾಗಿದ್ದು, ಮುಖ್ಯಮಂತ್ರಿ ಅವರಂತೂ ಮೂರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಕುರಿತಾಗಿ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಅಧಿಕಾರ ವಿಷಯವಾಗಿ ಕಾಂಗ್ರೆಸ್ ನಲ್ಲಿ ಸಾಕಷ್ಟು ಗೊಂದಲ ಆಂತರಿಕ ಕಲಹ ಕಂಡು ಬರುತ್ತಿದ್ದು, ಪಕ್ಷ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿಯೇ ಇಂತಹ ಬೆಳವಣಿಗೆ ನಡೆಯುತ್ತಿದೆ ಎಂದರು.

ಜನರಿಗೆ ಸುಳ್ಳು ಗ್ಯಾರಂಟಿಗಳನ್ನು ನೀಡುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನರಿಗೆ ಒಳಿತಾಗುವ ಆಡಳಿತ ನೀಡಲಿ ಎಂಬುದು ನಮ್ಮ ಆಶಯ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂಬುದು ಕಾಂಗ್ರೆಸ್ ಶಾಸಕರೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಹಲವು ಶಾಸಕರು ರಸ್ತೆ ಇನ್ನಿತರ ಕಾಮಗಾರಿಗೆ ಕೇಂದ್ರದಿಂದ ಹಣ ಕೊಡಿಸಿ ಎಂದು ನನ್ನ ಬಳಿ ಬರುತ್ತಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಎದುರಿಗೆ ನಿಲ್ಲಲು ಹೆದರುತ್ತಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವವೇ ಒಪ್ಪುವ ವರ್ಚಸ್ಸಿನ ನಾಯಕ ನರೇಂದ್ರ ಮೋದಿಯವರು ಎಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇದೇ ರೀತಿಯ ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಹ ವರ್ತನೆ ತೋರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ತನ್ನ ಹಣವನ್ನು ಬಿಡುಗಡೆ ಮಾಡಲಿ ಜೊತೆಗೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ ನೀಡಿರುವ ಹಣವನ್ನು ಖರ್ಚು ಮಾಡಿ ಕೇಂದ್ರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಲಿ. ನಿಯಮಕ್ಕನುಸಾರವಾಗಿ ಹಣ ನೀಡುತ್ತೇವೆ ಎಂದರು.

ರಾಜ್ಯದ ಬಿಜೆಪಿ ಅಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಇದು ಪಕ್ಷದ ಸೂಕ್ತ ನಿರ್ಧಾರವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರ ಆಯ್ಕೆಯನ್ನು ಕಾಂಗ್ರೆಸ್ ಬಾಲಿಶ ರೀತಿಯಲ್ಲಿ ಟೀಕಿಸುತ್ತಿದ್ದು ಮೂರು ವರ್ಷಗಳವರೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲಾಗದ ಸ್ಥಿತಿಗೆ ತಲುಪಿತ್ತು. ನಂತರ ರಾಹುಲ್ ಗಾಂಧಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ನಿರಾಕರಿಸಿದರಿಂದ ಅನಿವಾರ್ಯವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅವರಿಗೆ ಯಾವುದೇ ಅಧಿಕಾರ ನೀಡದೆ ಗಾಂಧಿ ಕುಟುಂಬವೇ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದರು.

ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಯಾರ ವಿರೋಧವಿಲ್ಲ. ಕೆಲ ಆಕಾಂಕ್ಷಿಗಳಲ್ಲಿ ನೋವು ಇರಬಹುದು. ಈ ಬಗ್ಗೆ ಅವರೊಂದಿಗೆ ಚರ್ಚಿಸಿ ಸರಿಪಡಿಸಲಾಗುವುದು. ಎಲ್ಲರೂ ಸೇರಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next