ಬಾದೋನ್, ಉತ್ತರ ಪ್ರದೇಶ : ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಲಿಯ ಮತವೂ ಸಿಗಲ್ಲ; ಬಜರಂಗ ಬಲಿಯ ಮತವೂ ಸಿಗಲ್ಲ’ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವ್ಯಂಗ್ಯವಾಡಿದ್ದಾರೆ.
ಎಸ್‌ಪಿ ಅಭ್ಯರ್ಥಿ ಧರ್ಮೇಂದ್ರ ಯಾದವ್ ಪರವಾಗಿ ಇಲ್ಲಿ ನಡೆದ ಬಿಎಸ್‌ಪಿ-ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಜಂಟಿ ರಾಲಿಯಲ್ಲಿ ಮಾತನಾಡಿದ ಮಾಯಾವತಿ, “ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಪಕ್ಷಕ್ಕೆ ಅಲಿಯ ಮತವೂ ಸಿಗುವುದಿಲ್ಲ; ನನ್ನ ಜಾತಿಯವನಾಗಿರುವ ಬಜರಂಗ ಬಲಿಯ ಮತವೂ ಸಿಗುವುದಿಲ್ಲ” ಎಂದು ಹೇಳಿದರು.
“ಬಜರಂಗ ಬಲಿಯ ಜಾತಿಯನ್ನು ಶೋಧಿಸಿದವಳು ನಾನಲ್ಲ; ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥರು; ಬಜರಂಗ ಒಬ್ಬ ವನವಾಸಿ ಮತ್ತು ದಲಿತ ಎಂದು ಹೇಳಿದವರು ಅವರೇ” ಎಂದು ಮಾಯಾವತಿ ತಿರುಗೇಟು ನೀಡಿದರು.
“ನನ್ನ ಸಮುದಾಯದ ಪೂರ್ವಜರ ಬಗ್ಗೆ ಇಷ್ಟೊಂದು ಮುಖ್ಯ ಮಾಹಿತಿ ನೀಡಿರುವ ಯೋಗಿ ಅವರಿಗೆ ನನ್ನ ಧನ್ಯವಾದಗಳು; ಆದುದರಿಂದ ಅತ್ಯಂತ ಖುಷಿಯ ಸಂಗತಿ ಎಂದರೆ ಇವತ್ತು ಅಲಿ ಮತ್ತು ಬಜರಂಗ ಬಲಿ ಇಬ್ಬರೂ ನಮ್ಮ ಜತೆಗೆ ಇದ್ದಾರೆ; ಅಂತೆಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಅತ್ಯುತ್ತಮ ಫಲಿತಾಂಶ ನೀಡುವವರಿದ್ದೇವೆ ” ಎಂದು ಮಾಯಾವತಿ ಹೇಳಿದರು.
“ಅದೇ ರೀತಿ ಈ ಬಾರಿಯ ಚುನಾವಣೆಯಲ್ಲಿ ನಮೋ ನಮೋ ಜನರು ಅಧಿಕಾರದಿಂದ ಹೊರಬೀಳಲಿದ್ದಾರೆ ಮತ್ತು ಜೈ ಭೀಮ್ ಜನರು ಅಧಿಕಾರಕ್ಕೆ ಬರಲಿದ್ದಾರೆ ಮತ್ತು ಅದುವೇ ದೇಶದ ಇಂದಿನ ಅಗತ್ಯವಾಗಿದೆ’ ಎಂದು ಮಾಯಾವತಿ ಹೇಳಿದರು.