Advertisement

ಚುನಾವಣೆ ಮುಂದೂಡಿಕೆಗೆ ಬಿಜೆಪಿ ಆಗ್ರಹ

11:57 AM May 10, 2018 | |

ಬೆಂಗಳೂರು: ಸಾವಿರಾರು ನಕಲಿ ಗುರುತಿನ ಚೀಟಿ ಸಿಕ್ಕಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನಕ್ಕೆ ಕೇವಲ ಮೂರ್‍ನಾಲ್ಕು ದಿನಗಳು ಬಾಕಿ ಇರುವಾಗ ಹತ್ತು ಸಾವಿರಕ್ಕೂ ಅಧಿಕ ನಕಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಚುನಾವಣೆ ಮುಕ್ತ ಮತ್ತು ಪಾರದರ್ಶಕವಾಗಿ ನಡೆಯುವುದು ಅನುಮಾನ. ಆದ್ದರಿಂದ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು. 

Advertisement

ಅಲ್ಲದೆ ನಕಲಿ ಗುರುತಿನಚೀಟಿ ಪತ್ತೆಯಾದ ಮನೆ ಮಂಜುಳಾ ನಂಜಾಮರಿ ಅವರದ್ದಾಗಿದ್ದು, ತಕ್ಷಣ ಅವರನ್ನು ಪೊಲೀಸರು ಬಂಧಿಸಬೇಕು. ಹಾಗೂ ಮಂಜುಳಾ ಅವರ ಮೊಬೈಲ್‌ ವಶಕ್ಕೆ ಪಡೆಯುವುದರ ಜತೆಗೆ ಈಗಾಗಲೇ ವಶಪಡಿಸಿಕೊಂಡ ಉಪಕರಣಗಳನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದೂ ಒತ್ತಾಯಿಸಿದರು.
 
ಸಾಬೀತು: ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಮತದಾರರ ಗುರುತಿನಚೀಟಿ ಜಾಲದ ಕಿಂಗ್‌ಪಿನ್‌ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ. ಇದಕ್ಕೆ ಸ್ವತಃ ನಾನೇ ಸಾಕ್ಷಿ. ಮಂಗಳವಾರ ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಸುಮಾರು ಮೂರು ತಾಸು ನಾನು ಸ್ಥಳದಲ್ಲಿ ಇದ್ದೆ. ಆ ಲ್ಯಾಪ್‌ಟಾಪ್‌ಗ್ಳಲ್ಲಿರುವ ದಾಖಲೆಗಳು ಇದನ್ನು ಸಾಬೀತುಪಡಿಸುತ್ತವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಬಿಜೆಪಿ ಷಡ್ಯಂತ್ರ ಎಂದ ಕಾಂಗ್ರೆಸ್‌: ಇಡೀ ಪ್ರಕರಣದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಹಾಗೂ ಅನಂತಕುಮಾರ್‌ ಅವರು ಷಡ್ಯಂತ್ರ ನಡೆಸಿದ್ದು, ಇಬ್ಬರ ವಿರುದ್ಧ ಚುನಾವಣಾ ಆಯೋಗ ಎಫ್ಐಆರ್‌ ದಾಖಲಿಸಬೇಕು ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೇ ಮಿಡ್‌ನೈಟ್‌ ಡ್ರಾಮಾ ಸೃಷ್ಟಿಸಿ ರಾಜ್ಯದ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಆಧಾರರಹಿತ ಆರೋಪ ಮಾಡಿದ್ದು, ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಫ್ಲ್ಯಾಟ್‌ ಬಿಜೆಪಿಯ ಮಾಜಿ ಕಾರ್ಪೋರೇಟರ್‌ ಮಂಜುಳಾ ನಂಜಾಮರಿ ಅವರಿಗೆ ಸೇರಿದೆ. ಅದನ್ನು ತಮ್ಮ ಸಂಬಂಧಿ ರಾಕೇಶ್‌ ಎಂಬುವರಿಗೆ ಬಾಡಿಗೆಗೆ ನೀಡಿದ್ದಾರೆ. ರಾಕೇಶ್‌ 2015ರ ಬಿಬಿಎಂಪಿ ಚುನಾವಣೆಯಲ್ಲಿ ಜಾಲಹಳ್ಳಿ ವಾರ್ಡ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರಿಬ್ಬರೂ ಬಿಜೆಪಿಯಲ್ಲೇ ಸಕ್ರಿಯರಾಗಿದ್ದು, ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರೊಂದಿಗೂ ಪ್ರಚಾರದಲ್ಲಿ ಜೊತೆಗಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್‌ ಮನವಿ: ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆ ಮುಂದೂಡುವಂತೆ ರಾಜ್ಯ ಜೆಡಿಎಸ್‌ ಚುನಾವಣಾ ಆಯೋಗವನ್ನು ಮನವಿ ಮಾಡಿದೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ಮನವಿ ಸಲ್ಲಿಸಿದ್ದಾರೆ.

Advertisement

ಆರು ಮಂದಿ ಬಂಧನ: ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ ಬಳಿ ಮಂಗಳವಾರ ರಾತ್ರಿ ನಡೆದ ಗಲಾಟೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ ಸೇರಿ ಆರು ಮಂದಿಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಯಶವಂತಪುರ ವಾರ್ಡ್‌ ಸದಸ್ಯ ಜಿ.ಕೆ.ವೆಂಕಟೇಶ್‌, ಈತನ ಸಹಚರ ರಘು ಹಾಗೂ ಮಂಜುನಾಥ್‌, ಮೋಹನ್‌, ಕಿರಣ್‌, ಮಹಿಳಾ ಕಾರ್ಯಕರ್ತೆ
ಸುನಂದಾ ಬಂಧಿತರು. 

ಹತ್ತು ದಿನ ಹಿಂದೆಯೇ ಸುಳಿವು: ರಾಕೇಶ್‌ “ಹತ್ತು ದಿನಗಳ ಹಿಂದೆಯೇ ಉದ್ದೇಶಿತ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ನಕಲಿ ಮತದಾರರ ಗುರುತಿನಚೀಟಿ ತಯಾರಾಗುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ, ಮಂಗಳವಾರ ಅದು ಖಾತ್ರಿಯಾಯಿತು’ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಪ್ರಕರಣದ ರೂವಾರಿ ಎನ್ನಲಾದ ರಾಕೇಶ್‌ ತಿಳಿಸಿದರು. ಕೆಲ ದಿನಗಳಿಂದ ಅಪಾರ್ಟ್‌ಮೆಂಟ್‌ನ ಸಿಸಿಟಿವಿ, ಬೀದಿದೀಪ ನಿಧಾನವಾಗಿ ತೆರವುಗೊಳಿಸಲಾಗುತ್ತಿತ್ತು. ಹೊಸ ಮುಖಗಳು ಅಪಾರ್ಟ್‌ಮೆಂಟ್‌ನಲ್ಲಿ ಕಾಣಿಸುತ್ತಿದ್ದವು. ಈ ಬಗ್ಗೆ ಅನುಮಾನ ಬಂದಿತು. ಇದನ್ನು ಪತ್ತೆಹಚ್ಚುವಂತೆ ಸ್ಥಳೀಯ ಕಾರ್ಯಕರ್ತರಿಗೆ ಸೂಚನೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next