ಸುಳ್ಯ : ಬಿಜೆಪಿ ಅಧಿಕಾರದಲ್ಲಿದ್ದರೂ ಈ ಭಾಗದ ಕೃಷಿಕರ ಬಹುದೊಡ್ಡ ಸಮಸ್ಯೆಯಾಗಿರುವ ಅಡಿಕೆ ಹಳದಿ ರೋಗಕ್ಕೆ ಪರಿಹಾರ ಹಾಗೂ ಉದ್ದೇಶಿತ ಟಯರ್ ಫ್ಯಾಕ್ಟರಿ ಅನುಷ್ಠಾನ ಆಗದೇ ಇರುವುದು ಅತ್ಯಂತ ದೊಡ್ಡ ವೈಫಲ್ಯ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ. ಸದಾನಂದ ಗೌಡ ಹೇಳಿದರು.
ಸುಳ್ಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಡಿಕೆ ಹಳದಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಿತಿಯನ್ನು ರಚಿಸಲಾಗಿದ್ದರೂ ಏನೂ ಆಗಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭ 25 ಕೋಟಿ ರೂ. ವಿಶೇಷ ಅನುದಾನ ಇರಿಸಿದ್ದರೂ ಅದರ ಸಮರ್ಪಕ ವಿನಿಯೋಗ ಆಗಿಲ್ಲ ಎಂದರು.
ಸುಳ್ಯ ಭಾಗದಲ್ಲಿ ಬೆಳೆಯುವ ರಬ್ಬರ್‌ಗೆ ಉತ್ತಮ ಧಾರಣೆ ಹಾಗೂ ಮೌಲ್ಯ ದೊರೆಯಬೇಕೆಂಬ ದೃಷ್ಟಿಯಿಂದ ನಾನು ಸಿಎಂ ಆಗಿದ್ದ ಸಂದರ್ಭ ಸುಳ್ಯದಲ್ಲೊಂದು ಟಯರ್ ಫ್ಯಾಕ್ಟರಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಸಭೆ ನಡೆದಿದ್ದು ಅಜ್ಜಾವರ ಮತ್ತು ತೊಡಿಕಾನದಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿತ್ತು. ಆದರೆ ನನ್ನ ಅಧಿಕಾರಾವಧಿ ಮುಗಿದ ಬಳಿಕ ನನೆಗುದಿಗೆ ಬಿದ್ದು ಹಿನ್ನಡೆಯಾಯಿತು ಎಂದು ತಿಳಿಸಿದರು.
ಸಕಾಲ ಅನುಷ್ಠಾನಕ್ಕೆ ಆಗ್ರಹ
ಮುಖ್ಯಮಂತ್ರಿ ಅಗಿದ್ದ ಸಂದರ್ಭ ಸಕಾಲ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೆ. ಸಕಾಲ ಯಶಸ್ವಿಯಾಗಿ ಅನುಷ್ಠಾನವಾದರೆ ಸರಕಾರಿ ಇಲಾಖೆಯಲ್ಲಿ ಶೇ. 60ರಷ್ಟು ಭ್ರಷ್ಟಾಚಾರ ಕಡಿಮೆ ಮಾಡಬಹುದು. ಈ ಯೋಜನೆಯನ್ನು ಸರಕಾರ ಯಶಸ್ವಿಯಾಗಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಉಡುಪಿ : ಉಭಯ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಹೆಚ್ಚಳ, ಸ್ಯಾಟಲೈಟ್ ಸರ್ವೇ