ಔರಾದ್ : ಕಾಂಗ್ರೆಸ್ ಪಕ್ಷದ ನಾಯಕರಿಗಿಂತ ಬೀದರ್ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ನಮ್ಮ ವಿರುದ್ದ ಕೆಲಸ ಮಾಡುವುದರ ಜತೆಗೆ ಹಲವು ಅಭಿವೃದ್ಧಿಯ ಕಾಮಗಾರಿಗಳಿಗೆ ಅಡ್ಡಿ ಹಾಕುತ್ತಿದ್ದಾರೆಂದು ಬಿಜೆಪಿ ಶಾಸಕ ಪ್ರಭು ಚೌಹಾಣ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಪಕ್ಷದವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತಾಡಿ, ಪದೆಪದೇ ನಾನು ಮುಂಬೈ ಮೂಲದವನು ಎನ್ನುವುದನ್ನು ಸಚಿವ ಖೂಬಾ ಮೊದಲು ನಿಲ್ಲಿಸಲಿ. ನಾನೂ ಔರಾದ್ ತಾಲೂಕಿವನಾಗಿದ್ದು ಹೊಟ್ಟೆ ಪಾಡಿಗಾಗಿ ಮುಂಬೈಗೆ ಹೊಗಿದ್ದೆನೆ. ನನ್ನಂತೆ ತಾಲೂಕಿನ ಸಾವಿರಾರು ಜನರು ಕೆಲಸಕ್ಕಾಗಿ ಹೈದರಾಬಾದ್, ಮುಂಬೈ,ಬೆಂಗಳೂರಿನಲೂ ಇದ್ದಾರೆ ಅಂದರೆ ತಾಲೂಕಿನ ನಾಗರಿಕರೇ ಅಲ್ವವೆ ಎಂದು ಪ್ರಶ್ನೆ ಮಾಡಿದರು.
ಬೀದರ ಜಿಲ್ಲಾ ಕೇಂದ್ರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಪ್ರಭು ಚೌಹಾಣ್ ಲಕ್ಕಿ ಎಮ್ ಎಲ್ ಎ ಎಂದು ಹೇಳಿರುವುದು ಖಂಡನಿಯವಾಗಿದೆ. ಆ ಮಾತು ವಾಪಸ್ ಪಡೆಯಲಿ. ನಾನೂ ಮುಂಬಯಿ ಠಾಣೆ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾಗಿ ತಳ ಮಟ್ಟದಿಂದ ಕೆಲಸ ಮಾಡಿ 2006ರಲ್ಲಿ ತಾಲೂಕಿಗೆ ಬಂದು ಉತ್ತಮ ಕೆಲಸ ಮಾಡಿ 2008ರಲ್ಲಿ ತಾಲೂಕಿನ ಶಾಸಕನಾಗಿದ್ದೇನೆ.ಖೂಬಾ ಅವರಂತೆ ಮೋದಿ ಹೆಸರಿನಲ್ಲಿ ಗೆಲುವು ಸಾಧಿಸಿರುವವನು ನಾನಲ್ಲ.ಖೂಬಾಗೆ ಟಿಕೆಟ್ ನೀಡುವಂತೆ ನಾನೇ ಪ್ರಸ್ತಾವನೆ ಮಾಡಿದ್ದೆನೆ, ಇವತ್ತು ಸಚಿವ, ಸಂಸದರಾಗಿರುವುದಕ್ಕೆ ನಾನೂ ನಮ್ಮ ಬಿಜೆಪಿ ಪಕ್ಷವೇ ಮೂಲ ಕಾರಣವಾಗಿದೆ ಎಂದರು.
ತಮ್ಮದೆ ಪಕ್ಷದ15 ಜನ ಕಾರ್ಯಕರ್ತರ ಮೇಲೆ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಗುಂಡಾ ಕಾಯ್ದೆಯಡಿ ಪ್ರಕಣ ದಾಖಲಿಸಿ, ಔರಾದ್ ತಾಲೂಕಿನ ಬಿಜೆಪಿ ಮಾಜಿ ತಾಪಂ ಸದಸ್ಯರ ಸಹೋದರ ಶಿಕ್ಷಕರು ಗೊಬ್ಬರ ಕೇಳಿದರೆ ಸಸ್ಪೆಂಡ್ ಮಾಡಿಸಿ, ತಾನು ಜನ ಸೇವಕ ಎನ್ನುವುದು ಮರೆತು ತಮ್ಮ ಪಕ್ಷದ ಕಾರ್ಯಕರ್ತರನ್ನೆ ಟಾರ್ಗೆಟ್ ಮಾಡುತ್ತಿರುವ ರಾಜ್ಯದ ಮೊದಲ ಪಕ್ಷ ವಿರೋಧಿ ಸಂಸದ ಖೂಬಾ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಪಕ್ಷವನ್ನು ಬಿಟ್ಟ ಭಗವಂತ ಖೂಬಾ ಬೆಂಬಲಿಗರ 33ಜನರ ತಂಡದ ಸದಸ್ಯರು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬರುವುದಾಗಿ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರು ಮತ್ತೆ ಪಕ್ಷಕ್ಕೆ ಬಂದರೆ ಪಕ್ಷದ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತರೇ ಅದೇ ಕಾರ್ಯಕ್ರಮ ವೇದಿಕೆಯಿಂದ ಕೆಳಗೆ ಇಳಿಯುತ್ತೆನೆಂದು ಸವಾಲು ಹಾಕಿದರು.
ಬೆಜಿಪಿ ಜಿಲ್ಲಾಧ್ಯಕ್ಷ ಶಿವಾನಂದ ಮಠಾಳಕರ ಮಾತನಾಡಿ,ಚುನಾವಣೆಯಲ್ಲಿ ಹಾಗೂ ಇನ್ನಿತರ ಸಮಯದಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಮಂಡಲ ಅಧ್ಯಕ್ಷರಿಗೆ ಪೂರ್ಣಪ್ರಮಾಣದ ಅಧಿಕಾರ ನೀಡಲಾಗಿದೆ ಅದರಂತೆ ಯಾವುದೇ ಕಾರಣಕ್ಕೂ ಪಕ್ಷ ವಿರೋಧಿಗಳಿಗೆ ಪಕ್ಷದಲ್ಲಿ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದರು.
ಖೂಬಾ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಮಾತ್ರ ಚುನಾವಣೆಯಲ್ಲಿ ಕೆಲಸ ಮಾಡುತ್ತೆವೆ ಇಲ್ಲವಾದಲ್ಲಿ ನಾವು ಮನೆಯಲ್ಲೆ ಇರುತ್ತೇವೆ ಎಂದು ಕಾರ್ಯಕಾರಣಿ ಸದಸ್ಯರು ಸಭೆಯಲ್ಲಿ ತಿಳಿಸಿದರು. ತಾಲೂಕು ಜಿಲ್ಲಾ ಮಟ್ಟದ ಪಕ್ಷದ ಮುಖಂಡರು ಸಭೆಯಲ್ಲಿ ಇದ್ದರು.