ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ “ಹಾವು-ಮುಂಗುಸಿ’ ಎಂದೇ ಪರಿಗಣಿಸಲ್ಪಟ್ಟಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ದಿಲ್ಲಿ ಕಚೇರಿಯಲ್ಲಿ ಮುಖಾಮುಖೀಯಾಗಿರುವುದು ರಾಜಕೀಯ ವಲಯದಲ್ಲಿ ನಾನಾ ಚರ್ಚೆಗೆ ಕಾರಣವಾಗಿದೆ. ಆದರೆ ಇಬ್ಬರ ನಡುವಿನ ಮಾತುಕತೆ “ಕುಶಲೋಪರಿ’ ಹಂತ ದಾಟಿ ಹೋಗಿಲ್ಲ ಎನ್ನಲಾಗಿದೆ.
ಸಂಸತ್ ಆವರಣದಲ್ಲಿರುವ ಪ್ರಹ್ಲಾದ್ ಜೋಷಿ ಕಚೇರಿಯಲ್ಲಿ ಈ ಆಕಸ್ಮಿಕ ಭೇಟಿ ನಡೆದಿದೆ. ಸಕ್ಕರೆ ಕಾರ್ಖಾನೆ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ದಿನಗಳಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿರುವ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ, ಸಂಸದರಾದ ಗದ್ದಿಗೌಡರ್, ಪಿ.ಸಿ.ಮೋಹನ್ ಹಾಗೂ ಮಾಜಿ ಸಂಸದ ಬಿ.ವಿ.ನಾಯಕ್ ಜೋಷಿ ಜತೆಗೆ ಚರ್ಚಿಸುತ್ತಿದ್ದಾಗ ಅಲ್ಲಿಗೆ ವಿಜಯೇಂದ್ರ ಆಗಮಿಸಿದ್ದರಿಂದ ಇಬ್ಬರ ಭೇಟಿ ಅನಿವಾರ್ಯವಾಯಿತು.
“ಏನು ಗೌಡ್ರೇ ಆರಾಮಾ’ ಎಂದು ಜೋಷಿ ಪಕ್ಕದಲ್ಲಿ ಆಸೀನರಾಗಿದ್ದ ಯತ್ನಾಳ್ ಅವರನ್ನು ವಿಜಯೇಂದ್ರ ಮೊದಲು ಮಾತನಾಡಿಸಿದರು. “ಆರಾಮಾ ಅದಿನಿ’ ಎಂದು ಯತ್ನಾಳ್ ಪ್ರತಿಕ್ರಿಯೆ ನೀಡಿದರು. ಇವಿಷ್ಟನ್ನು ಹೊರತುಪಡಿಸಿದರೆ ಇಬ್ಬರ ನಡುವೆ ಯಾವುದೇ ಚರ್ಚೆ ನಡೆದಿಲ್ಲ. ಉಳಿದವರ ಜತೆಗೆ ಯತ್ನಾಳ್ ಮಾತನಾಡುವಾಗ ವಿಜಯೇಂದ್ರ ಮೌನವಾಗಿದ್ದರೆ, ವಿಜಯೇಂದ್ರ ಮಾತನಾಡುವಾಗ ಯತ್ನಾಳ್ ಸುಮ್ಮನೆ ಕುಳಿತಿದ್ದರು. ಹೀಗಾಗಿ ಸಾಮಾಜಿಕ ಜಾಲತಾಣ ಹಾಗೂ ಇತರ ಮಾಧ್ಯಮಗಳಲ್ಲಿ ಚರ್ಚಿತವಾದ ರೀತಿಯಲ್ಲಿ ಇದು ಸಂಧಾನ ಸಭೆಯಾಗಿರಲಿಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.
ಈ ಸಭೆಯಿಂದ ಆಚೆ ಬಂದ ಬಳಿಕ ಎಕ್ಸ್ ವೇದಿಕೆಯಲ್ಲಿ ಫೋಟೋ ಹಂಚಿಕೊಂಡಿರುವ ವಿಜಯೇಂದ್ರ ಕೇಂದ್ರ ಸಂಸದೀಯ ವ್ಯವಹಾರ, ಕಲಿದ್ದಲು ಹಾಗೂ ಗಣಿ ಖಾತೆ ಸಚಿವರಾದ ಪ್ರಹ್ಲಾದ್ ಜೋಷಿಯವರನ್ನು ಭೇಟಿಯಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಸಂಸದರು, ಮಾಜಿ ಸಂಸದರು ಹಾಗೂ ಮಾಜಿ ಸಚಿವರು ಉಪಸ್ಥಿತರಿದ್ದರು ಎಂದು ಬರೆದುಕೊಂಡಿದ್ದಾರೆ. ಯಾರ ಹೆಸರನ್ನೂ ನಮೂದಿಸದೇ ಇರುವುದರಿಂದ ಸಂಧಾನ ಪ್ರಕ್ರಿಯೆ ನಡೆದಿಲ್ಲ ಎಂದು ಪರೋಕ್ಷ ಸಂದೇಶ ಕಳುಹಿಸಿದ್ದಾರೆ. ಜತೆಗೆ ದಿಲ್ಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಇದಕ್ಕೆ ಬಹಳ ವಿಶೇಷತೆ ಅಥವಾ ಬೇರೆ ಅರ್ಥ ಕೊಡಬೇಕಿಲ್ಲ ಎಂದು ಉತ್ತರಿಸಿದ್ದಾರೆ. ಯತ್ನಾಳ್ ಸಾಮಾಜಿಕ ಜಾಲತಾಣದಲ್ಲಂತೂ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದಿರುವುದು ಗಮನಾರ್ಹ.
ಯತ್ನಾಳ್‌ಗೆ ಸೂಚನೆ
ಆದರೆ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ನಾಯಕರ ವಿರುದ್ಧ ಯಾವ ಹೇಳಿಕೆಯನ್ನೂ ನೀಡದಂತೆ ವರಿಷ್ಠರು ಯತ್ನಾಳ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿ ಅಮಿತ್ ಶಾ ಭೇಟಿಯಾಗಿದ್ದ ಯತ್ನಾಳ್‌ಗೆ ಈ ಸೂಚನೆ ನೀಡಲಾಗಿದೆ. ಹೀಗಾಗಿ ಅವರು ಮೌನಕ್ಕೆ ಜಾರಿದ್ದಾರೆ ಎನ್ನಲಾಗುತ್ತಿದೆ.