Advertisement

BJP; ವಿಜಯೇಂದ್ರ ನನ್ನ ಮನೆಗೆ ಬರುವುದು ಬೇಡ: ಯತ್ನಾಳ್ ಆಕ್ರೋಶ

05:38 PM Nov 24, 2023 | Team Udayavani |

ವಿಜಯಪುರ : ನನ್ನನ್ನು ರಾಜಕೀಯವಾಗಿ ತುಳಿಯಲು ಯತ್ನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿಗಾಗಿ ನನ್ನ ಮನೆಗೆ ಬರುವುದು ಬೇಡ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಡಕ್ ಎಚ್ಚರಿಕೆ ನೀಡಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾದ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬರೆಯುತ್ತಿದ್ದ ಪತ್ರಗಳನ್ನೆಲ್ಲ ಈ ವಿಜಯೇಂದ್ರ ತನ್ನ ಬಳಿ ಇರಿಸಕೊಳ್ಳುತ್ತಿದ್ದ. ವಿಜಯಪುರ ನಗರ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆ ಆಗಿದ್ದ 125 ಕೋಟಿ ರೂ. ಅನುದಾನವನ್ನು ತಡೆ ಹಿಡಿಯುವಲ್ಲಿ ವಿಜಯೇಂದ್ರ ಪಾತ್ರವಿದೆ ಎಂದು ಕಿಡಿ ಕಾರಿದರು.

ನನ್ನನ್ನು ಮಂತ್ರಿ ಮಾಡದೇ ಹಾಗೂ ಪಕ್ಷದಿಂದ ನನ್ನನ್ನು ಹೊರ ಹಾಕುವಲ್ಲಿ ಇವರು ಮಾಡಿರುವ ಎಲ್ಲ ನಾಟಕಗಳು ನನಗೆ ಗೊತ್ತಿದೆ. ಈಗ ನಾಟಕೀಯವಾಗಿ ನನ್ನ ಭೇಟಿಗೆ ಹೂಗುಚ್ಚ ಹಿಡಿದು ನನ್ನ ಮನೆಗೆ ಬಂದು ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಇವರ ಹುನ್ನಾರ ನನಗೆ ಗೊತ್ತಿದೆ. ಹೀಗಾಗಿ ಭೇಟಿಗೆ ವಿಜಯೇಂದ್ರ ನನ್ನ ಮನೆಗೆ ಬರುವುದು ಬೇಡ ಎಂದು ಕಿಡಿ ಕಾರಿದರು.

ನನ್ನ ವಿರುದ್ಧ ಇವರು ಆಡಿರುವ ಆಟಗಳು, ಕೆಲಸಗಳ ಕುರಿತು ನನ್ನ ಬಳಿ ಸಮಗ್ರ ಮಾಹಿತಿ ಇದೆ. ಹೀಗಾಗಿ ಕಾಟಾಚಾರಕ್ಕೆ ಹೂಗುಚ್ಚ ಹಿಡಿದು ನನ್ನ ಮನೆಗೆ ಬರುವುದು ಬೇಡ ಎಂದು ನಾನೇ ಹೇಳಿದ್ಧೇನೆ. 2024 ರಲ್ಲಿಯೂ ಮೋದಿ ಅವರನ್ನೇ ದೇಶದ ಪ್ರಧಾನಿ ಮಾಡುವ ಸಂಕಲ್ಪ ಮಾಡಿದ್ದೇವೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ತಾಯಿ ಮೇಲಾಣೆ, ದೇವರ ಸಾಕ್ಷಿಯಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇವೆ ಎಂದರು.

ಮೋದಿ ಅವರನ್ನು ಮೂರನೇ ಬಾರಿಗೆ ದೇಶಧ ಪ್ರಧಾನಿ ಮಾಡುವುದು ನಮ್ಮ ಮುದಿರುವ ಗುರಿ. ಹೀಗಾಗಿ ನಾನು ಮಾತ್ರವಲ್ಲ ಸೋಮಣ್ಣ, ಸತೀಶ ಜಾರಕಿಹೊಳಿ, ಅರವಿಂದ ಬೆಲ್ಲದ, ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ ಎಲ್ಲರೂ ಬಿಜೆಪಿ ಪರವಾಗಿಯೇ ಲೋಕಸಭೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದರು.

Advertisement

ಭಾರತ ವಿಶ್ವದಲ್ಲಿ ಮತ್ತೊಂದು ಇಸ್ರೇಲ್ ಆಗಬಾರದು, ದೇಶದಲ್ಲಿ ಭಯೋತ್ಪಾದನೆ ಮೂಲೋತ್ಪಾಟನೆ ಆಗಬೇಕಿದೆ. ಇದಕ್ಕಾಗಿ ನಮ್ಮೊಳಗಿನ ಸ್ವಾರ್ಥ, ಅಸೂಯೆಗಳನ್ನೆಲ್ಲ ಮರೆತು, ಮೋದಿ ಅವರ ಗೆಲುವಿಗೆ ಇರುವ ಎಲ್ಲ ಅಡೆತಡೆಗಳನ್ನು ತೆರವು ಮಾಡಿ ಬಿಜೆಪಿ ಪರವಾಗಿಯೇ ಚುನಾವಣೆ ಮಾಡಲಿದ್ದೇವೆ ಎಂದರು.

ಮಾಜಿ ಸಚಿವ ಸೋಮಣ್ಣ ಕಾಂಗ್ರೆಸ್ ಸೇರುತ್ತಾರೆ ಎಂಬುದೆಲ್ಲ ಸುಳ್ಳು. ಸೋಮಣ್ಣ ಡಿ.6 ರ ಗಡುವು ನೀಡಿರುವುದರ ಹಿಂದೆ ಹೈಕಮಾಂಡ್ ನ ಏನೋ ಸಂದೇಶ ಇರಬಹುದು, ಕಾದು ನೋಡಿ ಎಂದರು.

ಸರ್ಕಾರದ ವಿರುದ್ಧ ಕೋರ್ಟ್ ಮೋರೆ 
 ಡಿ.ಕೆ.ಶಿವಕುಮಾರ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ರಾಜ್ಯ ಸಚಿವ ಸಂಪುಟ ನಿರ್ಧಾರ ದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ ನೀಡಿದ್ದಾರೆ.
 ಭ್ರಷ್ಟಾಚಾರದಲ್ಲಿ ಪಾಲ್ಗೊಂಡವರಿಗೆ ಶಿಕ್ಷೆ ಆಗಲೇಬೇಕು. ತಮ್ಮ ಸರ್ಕಾರ ಇದೆ ಎಂದು ಕಾನೂನು ಬಾಹೀರವಾಗಿ ಸಿಬಿಐ ತನಿಖೆಗೆ ನೀಡಿರುವ ಅನುಮತಿಯನ್ನು ಸಂಪುಟದಲ್ಲಿ ಹಿಂಪಡೆಯಲಾಗಿದೆ ಎಂದರು ಕಿಡಿ ಕಾರಿದರು.
135 ಶಾಸಕರಿರುವ ಬಲಿಷ್ಠ ಸರ್ಕಾರ ಇದೆ ಎಂದ ಮಾತ್ರಕ್ಕೆ ವಿಪಕ್ಷಗಳು ಇದನ್ನು ಪ್ರಶ್ನಿಸುವುದಿಲ್ಲ ಎಂದು ಭಾವಿಸಿದಂತಿದೆ. ನಮ್ಮಂಥ ಕೆಲವರು ಈ ವಿಷಯದಲ್ಲಿ ದೃಢವಾಗಿದ್ದು, ಗಟ್ಟಿ ಧ್ವನಿಯಲ್ಲೇ ವಿರೋಧಿಸಲಿದ್ದೇವೆ ಎಂದರು.
ಸದರಿ ಪ್ರಕರಣದಲ್ಲಿ ಶಿವಕುಮಾರ ಪರ ವಕಾಲತು ವಿಧಿಸಿದ್ದ ಶಶಿಕಿರಣ ಶೆಟ್ಟಿ ಅವರೇ ಇದೀಗ ರಾಜ್ಯ ಸರ್ಕಾರ ಅಡ್ವೋಕೇಟ್ ಜನರಲ್ ಆಗಿದ್ದು, ಅವರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮ್ಮ ಸರ್ಕಾರ ಇದೆ ಎಂದು ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳಲಾಗದು. ಈ ಕುರಿತು ಕಾನೂನು ಪರಿಣಿತರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆ ಅಣಿಯಾಗುವುದಾಗಿ ಎಚ್ಚರಸಿದರು.
ಡಿ.ಕೆ.ಶಿವಕುಮಾರ ವಿರುದ್ಧ ನನ್ನ ಹೋರಾಟಕ್ಕೆ ನಮ್ಮ ಪಕ್ಷ ಇಬ್ಬರು ಪ್ರಮುಖರಿದ್ದು, ಅವರೂ ನನ್ನ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಆಗ್ರಹಿಸಿದರು.

ಹಲಾಲ್ ಸರ್ಟಿಫಿಕೇಟ್ ಅಧಿಕಾರ ಕೇಂದ್ರಕ್ಕೆ

ರಾಜ್ಯ ಸರ್ಕಾರ ಹಲಾಲ್ ಪ್ರಮಾಣ ಪತ್ರ ನೀಡುವ ವಿರುದ್ಧ ನಿರ್ಬಂಧ ಹೇರುವ ವಿಷಯದಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆಯುವುದಾಗಿ ಹೇಳಿದರು.ಆಹಾರ ಸುರಕ್ಷತಾ ಕಾಯ್ದೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪ್ರಮಾಣಪತ್ರ ನೀಡಲಾಗುತ್ತದೆ.ಹಲಾಲ್ ಪ್ರಮಾಣ ಪತ್ರ ನೀಡಲು ಹಣ ಪಡೆಯಲಾಗುತ್ತದೆ. ಅಕ್ರಮ ಮಾರ್ಗದಲ್ಲಿ ಸಂಗ್ರಹವಾಗುವ ಇಂತ ಹಣ ದೇಶ ವಿರೋಧಿ ಚಟುವಟುಕೆಗಳಿಗೆ, ಭಯೋತ್ಪಾದನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗಳ ಪರ ಕಾನೂನು ಹೋರಾಟಕ್ಕೆ ಬಳಸಲಾಗುತ್ತದೆ. ಹೀಗಾಗಿ ಆಹಾರ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಕೊಡಬೇಕು.ಆಹಾರ ಸುರಕ್ಷತಾ ವಿಷಯದಲ್ಲಿ ನಾವು ಪ್ರಮಾಣಪತ್ರ ನೀಡುತ್ತೇವೆ ಎಂದರೆ ಆಗುವ ಕೆಲಸವಲ್ಲ. ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಯಾವುದೇ ಒಂದು ಕೋಮು, ಜಾತಿಯ ಆಹಾರದ ವಿಚಾರದಲ್ಲಿ ಪ್ರಮಾಣ ಪತ್ರ ನೀಡಲು ಯಾವುದೇ ಅವಕಾಶವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next