ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಪಾಕ್‌ನ ಪತ್ರಕರ್ತರೊಬ್ಬರೊಂದಿಗೆ ನಂಟಿತ್ತು ಎಂಬ ಬಿಜೆಪಿ ಆರೋಪವನ್ನು ಅನ್ಸಾರಿ ಅಲ್ಲಗಳೆದ ಬೆನ್ನಲ್ಲೇ, ಬಿಜೆಪಿ ಅದಕ್ಕೆ ಸಾಕ್ಷ್ಯವೊಂದನ್ನು ನೀಡಿದೆ. ಅನ್ಸಾರಿ ಹಾಗೂ ಪಾಕ್ ಪತ್ರಕರ್ತ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿರುವ ಫೋಟೋವನ್ನು ಶುಕ್ರವಾರ ಬಿಜೆಪಿ ಬಿಡುಗಡೆ ಮಾಡಿದೆ.
ನವದೆಹಲಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, 2009ರಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಅನ್ಸಾರಿ ಹಾಗೂ ಪತ್ರಕರ್ತ ನುಸ್ರತ್ ಮಿರ್ಜಾ ಒಂದೇ ವೇದಿಕೆಯಲ್ಲಿ ಕುಳಿತಿರುವ ಫೋಟೋವನ್ನು ಬಹಿರಂಗಪಡಿಸಿದ್ದಾರೆ. ಜತೆಗೆ, ಸಾಂವಿಧಾನಿಕ ಹುದ್ದೆ ಹೊಂದಿರುವ ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಅವರು ಮಿರ್ಜಾ ಜೊತೆ ವೇದಿಕೆ ಹಂಚಿಕೊಳ್ಳಬಾರದಿತ್ತು ಎಂದೂ ಹೇಳಿದ್ದಾರೆ.
“ನಾನು ಅನ್ಸಾರಿ ಅವರ ಆಹ್ವಾನದ ಮೇರೆಗೆ ಯುಪಿಎ ಆಡಳಿತದ ಅವಧಿಯಲ್ಲಿ 5 ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ. ಭಾರತದಲ್ಲಿ ಸಂಗ್ರಹಿಸಿದ ಹಲವು ಸೂಕ್ಷ್ಮ ಮಾಹಿತಿಗಳನ್ನು ನಾನು ನಮ್ಮ ದೇಶದ ಐಎಸ್‌ಐಗೆ ಹಸ್ತಾಂತರಿಸಿದ್ದೆ’ ಎಂದು ಮಿರ್ಜಾ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಆದರೆ, ಈ ಆರೋಪ ಅಲ್ಲಗಳೆದಿದ್ದ ಅನ್ಸಾರಿ ಅವರು, “ಇದೆಲ್ಲ ಸುಳ್ಳಿನ ಸರಮಾಲೆ. ನಾನು ಯಾವ ಪತ್ರಕರ್ತನನ್ನೂ ಆಹ್ವಾನಿಸಿರಲಿಲ್ಲ, ಭೇಟಿಯೂ ಆಗಿರಲಿಲ್ಲ’ ಎಂದಿದ್ದರು.