ಹೊಸದಿಲ್ಲಿ: 2019ರ ಲೋಕಸಭೆ ಚುನಾವಣೆಯಲ್ಲಿ ಸುಮಾರು ಶೇ.38ರಷ್ಟು ಮತಗಳನ್ನು ಪಡೆಯುವ ಮೂಲಕ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, 2024ರ ಲೋಕಸಭೆ ಚುನಾವಣೆಯಲ್ಲಿ 350ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಪಕ್ಷವು ಏಕಕಾಲಕ್ಕೆ ಹಲವು ಕಡೆ ಕೆಲಸ ಮಾಡುತ್ತಿದೆ.
ಕೇಸರಿ ಪಕ್ಷವು ತನ್ನ ಭದ್ರಕೋಟೆಯನ್ನು ಹೊಂದಿರುವ ಸ್ಥಾನಗಳ ಜೊತೆಗೆ, ಈ ಬಾರಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್, ಶರದ್ ಪವಾರ್ ಮತ್ತು ಹಿರಿಯ ನಾಯಕರು ಹೊಂದಿರುವ ಹಲವಾರು ಸಂಸದರ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ. ಈ ಕ್ಷೇತ್ರಗಳಲ್ಲಿ ಎಂದಿಗೂ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲ.
ಅಲ್ಲದೆ ಪಕ್ಷವು 2019 ರಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ದಕ್ಷಿಣ ಭಾರತದ ಆ ರಾಜ್ಯಗಳ ಮೇಲೆಯೂ ಕಣ್ಣಿಟ್ಟಿದೆ. ಕಳೆದ ವರ್ಷ ಬಿಜೆಪಿ 2019ರ ಚುನಾವಣೆಯಲ್ಲಿ ಸೋತ ಲೋಕಸಭಾ ಕ್ಷೇತ್ರಗಳ ವಿಶೇಷ ಪಟ್ಟಿಯನ್ನು ಸಿದ್ಧಪಡಿಸಿತ್ತು. ಈ ಪಟ್ಟಿಯಲ್ಲಿ ನಿರ್ದಿಷ್ಟವಾಗಿ ಬಿಜೆಪಿ 2 ನೇ ಸ್ಥಾನದಲ್ಲಿದ್ದ ಅಥವಾ ಅತಿ ಕಡಿಮೆ ಅಂತರದಿಂದ ಸೋತ ಲೋಕಸಭಾ ಸ್ಥಾನಗಳನ್ನು ಒಳಗೊಂಡಿದೆ. ಈ ಹಿಂದೆ 144 ಕ್ಷೇತ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು, ನಂತರ ಅದು 160 ಕ್ಕೆ ಏರಿತು.
ಇದನ್ನೂ ಓದಿ:Restriction ನಡುವೆಯೂ ದೂಧ್ ಸಾಗರ್ ಜಲಪಾತದತ್ತ ಪ್ರವಾಸಿಗರ ದಂಡು ; ವಿಡಿಯೋ ವೈರಲ್
ಈ 160 “ದುರ್ಬಲ ಸ್ಥಾನಗಳ” ಬಗ್ಗೆ ವಿಶೇಷ ತಯಾರಿ ನಡೆಸುತ್ತಿರುವ ಪಕ್ಷವು ಅಷ್ಟೇ ಅಲ್ಲದೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ತೀವ್ರ ತಯಾರಿ ನಡೆಸುತ್ತಿದೆ. ತನ್ನ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ, ಬಿಜೆಪಿಯು ದೇಶದಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮೂರು ವಲಯಗಳಾಗಿ ವಿಂಗಡಿಸಿದೆ. ಸೂಕ್ಷ್ಮ ಮಟ್ಟದಲ್ಲಿ ತನ್ನ ಕಾರ್ಯತಂತ್ರಗಳ ನಿರ್ವಹಣೆ ಮತ್ತು ಕಾರ್ಯಗತಗೊಳಿಸುವಿಕೆಯನ್ನು ಸರಳೀಕರಿಸಲು ಪೂರ್ವ ಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಪ್ರದೇಶ ಎಂದು ವಿಂಗಡಿಸಲಾಗಿದೆ.