Advertisement

ಕಾಂಗ್ರೆಸ್‌ ಟ್ವೀಟ್‌ ಸಮರಕ್ಕೆ ಬಿಜೆಪಿ ಪ್ರತಿಸಮರ

12:00 PM Mar 13, 2018 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಮುಂದಿಟ್ಟುಕೊಂಡು “ಕನ್ನಡ ವಿರೋಧಿ ಬಿಜೆಪಿ’ ಎಂಬ 10 ಅಂಶಗಳ ಪಟ್ಟಿ ಮಾಡಿರುವ ಕಾಂಗ್ರೆಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿರುವ ಬಿಜೆಪಿ, ಟ್ವಿಟರ್‌ನಲ್ಲಿ ಸಮರವನ್ನೇ ಸಾರಿದೆ.

Advertisement

ರಾಜ್ಯಸಭೆ ಚುನಾವಣೆಗೆ ರಾಜೀವ್‌ ಚಂದ್ರಶೇಖರ್‌ ಅವರನ್ನು ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಬೆಂಗಳೂರು ಮತ್ತು ಕರ್ನಾಟಕದ ಬಗ್ಗೆ ರಾಜೀವ್‌ ಚಂದ್ರಶೇಖರ್‌ ದನಿ ಎತ್ತಿರುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್‌ನ ಸ್ಟೀಲ್‌ಬಿಡ್ಜ್ ವಿರುದ್ಧ ರಾಜೀವ್‌ ದನಿ ಎತ್ತಿದ್ದರು. ಕಾಂಗ್ರೆಸ್‌ನ ಜೈರಾಮ್‌ ರಮೇಶ್‌, ಬಿ.ಕೆ ಹರಿಪ್ರಸಾದ್‌ ಏನು ಮಾಡಿದ್ದರೆಂದು ಪ್ರಶ್ನಿಸಿದೆ.

ಕೊಡುಗೆಯೇ ಸಿಕ್ಕಿಲ್ಲ: ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಜೈರಾಮ್‌ ರಮೇಶ್‌, ಆಸ್ಕರ್‌ ಪರ್ನಾಂಡೀಸ್‌ ಅವರು ರಾಜ್ಯದ ಗೌರವಯುತ ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿದ್ದಕ್ಕಿಂತ ಹೆಚ್ಚು ದೆಹಲಿಯ “10 ಜನಪಥ್‌’ನ ಸಿಬ್ಬಂದಿಯಂತೆ ಕೆಲಸ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದೆ.

ರಾಜೀವ್‌ ಚಂದ್ರಶೇಖರ್‌ ಕೇರಳದವರು ಎಂಬ ಕಾರಣಕ್ಕೆ ಕಾಂಗ್ರೆಸ್‌ ಅವರ ಬಗ್ಗೆ ವಿರೋಧ ವ್ಯಕ್ತಪಡಿಸಿದೆ. ಆದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿರುವ ಕೆ.ಜೆ.ಜಾರ್ಜ್‌ ಮತ್ತು ಶಾಸಕ ಎನ್‌.ಎ.ಹ್ಯಾರಿಸ್‌ ಕೂಡ ಕೇರಳದವರು ಎಂಬುದನ್ನು ಕಾಂಗ್ರೆಸ್‌ ನೆನಪಿಸಿಕೊಳ್ಳಬೇಕು ಎಂದು ಹೇಳಿದೆ.

ನಾಡಹಬ್ಬ ದಸರೆಗೆ ಬಜೆಟ್‌ನಲ್ಲಿ ಅನುದಾನ ಕೊಡಲಿಲ್ಲ. ಸಮಯ ಮತ್ತು ಹಣ ಇಲ್ಲ ಎಂಬ ಕಾರಣ ಒಡ್ಡಿ ವಿಶ್ವ ಕನ್ನಡ ಸಮ್ಮೇಳನ ಆಚರಣೆ ಕೈಬಿಟ್ಟಿದ್ದೀರಿ. ಆದರೆ, ಕನ್ನಡ ವಿರೋಧಿ ಟಿಪ್ಪು ಜಯಂತಿ ಆಚರಿಸಲು ನಿಮಗೆ ಹಣವೂ ಇದೆ, ಸಮಯವೂ ಇದೆ ಎಂದು ಕಿಡಿಕಾರಿದೆ.

Advertisement

ಮಹದಾಯಿ ವಿಚಾರ ಎತ್ತಿದ ಬಿಜೆಪಿ, ಸೋನಿಯಾ ಗಾಂಧಿ ಗೋವಾ ನೆಲದಲ್ಲಿ ನಿಂತು ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ನೀಡುವುದಿಲ್ಲ ಎಂದು ಹೇಳಿದ್ದು ಕಾಂಗ್ರೆಸ್‌ ನಾಚಿಕೆ ಪಟ್ಟುಕೊಳ್ಳುವ ಸಂಗತಿಯಲ್ಲವೇ ಎಂದಿದೆ.

ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಕನ್ನಡ ವಿಚಾರ ಪ್ರಸ್ತಾಪಿಸಿದ್ದು, ಮೋದಿ ಸರ್ಕಾರ ಬಂದ ಮೇಲೆ ಎಐಐಎಂಎಸ್‌, ಐಐಟಿ, ಐಐಐಟಿ, ಕೌಶಲ್ಯಾಭಿವೃದ್ಧಿ ವಿವಿ, ಫ‌ುಡ್‌ಪಾರ್ಕ್‌ಗಳನ್ನು ರಾಜ್ಯಕ್ಕೆ ಮಂಜೂರು ಮಾಡಿರುವುದು, ರಾಜ್ಯಕ್ಕೆ ಅನುದಾನ ಹೆಚ್ಚಿಸಿರುವುದನ್ನು ಕೂಡ ಬಿಜೆಪಿ ಟ್ವಿಟರ್‌ನಲ್ಲಿ ಪ್ರಸ್ತಾಪಿಸಿದೆ. ಅಲ್ಲದೆ, ನಿಮ್ಮ ಢೋಂಗಿ ಕನ್ನಡ ಪ್ರೇಮ ನಮ್ಮ ಹಿಂದಿನ ಟ್ವೀಟ್‌ಗಳಲ್ಲಿ ಬಯಲುಮಾಡಿದ್ದೇವೆ. ಬಿಜೆಪಿ ಪ್ರಾದೇಶಿಕ ಭಾಷೆಗಳಿಗೆ ಎಂದಿನಿಂದಲೂ ಪ್ರಾಶಸ್ತ್ಯ ನೀಡುತ್ತಲೇ ಬಂದಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next