ಬೆಂಗಳೂರು: ಸಂವಿಧಾನ ಮಹಿಳೆಯರಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ನೀಡುತ್ತದೆ. ಆದರೆ, ಆ ಸಂವಿಧಾನ ವಿರೋಧಿಸಿದ್ದ ಸಾವರ್ಕರ್ ಬಿಜೆಪಿಯ ಗುರುಗಳು. ಈ ವಾಸ್ತವವನ್ನು ರಾಜ್ಯದ ಪ್ರತಿ ಹೆಣ್ಣು ಮಕ್ಕಳಿಗೆ ಮನದಟ್ಟು ಮಾಡಿಸುವ ಕೆಲಸ ಮಹಿಳಾ ಕಾಂಗ್ರೆಸ್‌ನಿಂದ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮಹಿಳಾ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅಧಿಕಾರ ನೀಡುತ್ತಿದ್ದೇವೆ. ಪ್ರತಿ ಮೂವರಲ್ಲಿ ಓರ್ವ ಮಹಿಳೆಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ ಎಂದರು.
ಬಳಿಕ ನಿಕಟಪೂರ್ವ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಸೌಮ್ಯಾ ರೆಡ್ಡಿ, ಮಹಿಳೆಯರಿಗೆ ರಾಜಕೀಯವಾಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಸಿಗಬೇಕಾದ ಹಕ್ಕು ಸಿಕ್ಕಿಲ್ಲ. ಕಾಟಾಚಾರಕ್ಕೆ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಮಹಿಳೆಯರ ಹಕ್ಕುಗಳ ರಕ್ಷಣೆ, ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಹೇಳಿದರು.
ನಿಮ್ಮ ಮೇಲೂ ಕೇಸ್ ಹಾಕಿದ್ದಾರೆ!
ಸಿಬಿಐ, ಇ.ಡಿ.ಯವರನ್ನು ದುರ್ಬಳಕೆ ಮಾಡಿಕೊಂಡು ಯಾರ್ಯಾರ ಮೇಲೋ ಕೇಸ್ ಹಾಕಿದರು ಎಂದು ಸಿಎಂ ಸಿದ್ದರಾಮಯ್ಯ ಭಾಷಣ ವೇಳೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ನಿಮ್ಮ ಮೇಲೂ ಕೇಸ್ ಹಾಕಿದ್ದಾರೆ ಎಂದು ಸಭೆಯಲ್ಲಿ ಮಹಿಳೆಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಆಗ ಪ್ರತಿಕ್ರಿಯಿಸಿದ ಸಿಎಂ, ನನ್ನ ಮೇಲೆ ಅಲ್ಲ ಎಂದು ಸಮಜಾಯಿಷಿ ನೀಡಿದರು.