ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬುತ್ತಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂರ್ಯ-ಚಂದ್ರರು ಇರುವಷ್ಟೇ ಸತ್ಯ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತೆ ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎನ್ನುವ ಕಾಂಗ್ರೆಸ್ ನಾಯಕರೆ ಲ್ಲರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಗಳೇ ಆಗಿದ್ದಾರೆ. ಪೂರ್ಣಾವಧಿ ಅಧಿಕಾರ ನಡೆಸುವ ವಿಶ್ವಾಸವಿದ್ದರೆ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿ ಎಂದು ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದರು.
ಹುಬ್ಬಳ್ಳಿ ಗಲಭೆ ಆರೋಪಿಗಳ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯಲು ನಿರ್ಧರಿಸಿರುವ ರಾಜ್ಯ ಸರಕಾರದ ನಿರ್ಧಾರ ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ಏನು ಭವಿಷ್ಯ ಹೇಳುತ್ತಾರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾನು ಈಗಲೂ ಹೇಳುತ್ತೇನೆ, ಸಿದ್ದರಾಮಯ್ಯ ರಾಜೀನಾಮೆ ನಿಶ್ಚಿತ ಎಂದರು.
ರಾಜ್ಯದಲ್ಲಿ ಹಿಂದೂ ವಿರೋಧಿ ಸರಕಾರ ಅಧಿಕಾರದಲ್ಲಿದ್ದು, ಅಲ್ಪಸಂಖ್ಯಾಕರ ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ಅಲ್ಪಸಂಖ್ಯಾಕರ ಓಲೈಕೆ ಮಾಡುವ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಇದು ಸಾಂಕೇತಿಕ ಪ್ರತಿಭಟನೆಯಾಗಿದೆ. ಹುಬ್ಬಳ್ಳಿ ಘಟನೆ ವಿಷಯದಲ್ಲಿ ಎನ್‌ಐಎ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿಗಳ ಕುರ್ಚಿ ಅಲ್ಲಾಡುತ್ತಿದೆ. ಸಾರ್ವಜನಿಕರ ಲಕ್ಷ್ಯ ಬೇರೆಡೆ ಸೆಳೆಯುವುದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗುವುದಕ್ಕೆ ಕಾಂಗ್ರೆಸ್ ಸಿದ್ಧವಿದೆ ಎಂದು ಟೀಕಿಸಿದರು.
ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಲೂಟಿ ಮಾಡಿದೆ. ಎಸ್‌ಇಪಿ, ಟಿಎಸ್‌ಪಿ ಹಣ ದುರುಪಯೋಗದ ಕುರಿತು ಜನರು ಚರ್ಚೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಯೇ ಇಲ್ಲವಾಗಿದೆ. ಇಂಥ ಸರಕಾರದಲ್ಲಿ ಶಾಸಕರಾಗಿರುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಒಳಿತೆಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ನಿಂತು ಹೋಗಿದೆ ಎಂದು ಆರೋಪಿಸಿದರು.