Advertisement
ಇದರ ಪ್ರಯತ್ನವಾಗಿಯೇ ಇತ್ತೀಚಿನವರೆಗೂ ಟಿಎಂಸಿ ಪ್ರಮುಖ ನಾಯಕನಾಗಿದ್ದ ಸುವೇಂದು ಅಧಿಕಾರಿ ಸೇರಿದಂತೆ ಹಲವಾರು ನಾಯಕರು ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಟಿಎಂಸಿಗೆ ಜೀವ ಕೊಟ್ಟ ನಂದಿಗ್ರಾಮ ಹೋರಾಟದ ಪಾತ್ರಧಾರಿಯೇ ಈ ಸುವೇಂದು ಅಧಿಕಾರಿ. ರಾಜಕೀಯ ಪಂಡಿತರು ಹೇಳುವ ಪ್ರಕಾರ, ಸುವೇಂದು ಅಧಿಕಾರಿ 110 ವಿಧಾನಸಭಾ ಕ್ಷೇತ್ರಗಳ ಗೆಲುವು ಮತ್ತು ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಬಿಜೆಪಿ ಪಾಲಿಗೆ ಇದೊಂದು ದೊಡ್ಡ ವಿಕೆಟ್.
Related Articles
Advertisement
ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಬಿಜೆಪಿ ಟಿಎಂಸಿಯ ಓಟ್ ಶೇರ್ ಅನ್ನು ಪಡೆದುಕೊಂಡಿತೇ ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ಸಿಗುತ್ತಿದೆ. ಏಕೆಂದರೆ, 2011ರಿಂದ 2019ರ ವರೆಗೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಓಟ್ ಶೇರ್ ಕಿಂಚಿತ್ತೂ ಕಡಿಮೆಯಾಗಿಲ್ಲ. 2011ರಲ್ಲಿ ಕಾಂಗ್ರೆಸ್ ಜತೆ ಸ್ಪರ್ಧೆ ಮಾಡಿದ್ದ ಟಿಎಂಸಿ 294 ಸ್ಥಾನಗಳಲ್ಲಿ 184ರಲ್ಲಿ ಗೆದ್ದಿತ್ತು. ಆಗ ಎರಡೂ ಪಕ್ಷಗಳ ಓಟ್ ಶೇರ್ ಶೇ.39.9. 2016ರಲ್ಲಿ ಕಾಂಗ್ರೆಸ್ ಇಲ್ಲದೆಯೇ ಸ್ಪರ್ಧಿಸಿದ್ದ ಟಿಎಂಸಿ 294 ವಿಧಾನಸಭಾ ಕ್ಷೇತ್ರಗಳಲ್ಲಿ 211ರಲ್ಲಿ ಗೆದ್ದು ಉಳಿದ ಪಕ್ಷಗಳನ್ನು ಧೂಳೀಪಟ ಮಾಡಿತ್ತು. ಆಗ ಟಿಎಂಸಿಯ ಓಟ್ ಶೇರ್ ಶೇ.45. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆಯೊಡ್ಡಿದರೂ ಟಿಎಂಸಿ 42 ಸ್ಥಾನಗಳಲ್ಲಿ 22 ಗೆದ್ದಿತ್ತು. ಆಗಿನ ಓಟ್ ಶೇರ್ ಶೇ.44. ಅಂದರೆ ಮಮತಾ ಬ್ಯಾನರ್ಜಿ ಅವರ ಪಕ್ಷದ ಸೀಟುಗಳಲ್ಲಿ ಕಡಿಮೆಯಾದರೂ, ಓಟ್ ಶೇರ್ ಮಾತ್ರ ಕಡಿಮೆಯಾಗಲಿಲ್ಲ. ಹೀಗಾಗಿ, ಬಿಜೆಪಿ ಟಿಎಂಸಿಯ ಮತವನ್ನು ಕಸಿದುಕೊಳ್ಳಲಿಲ್ಲ.
ವಿಶೇಷವೆಂದರೆ 2011ರಿಂದ 2019ರ ವರೆಗೆ ಬಿಜೆಪಿ ಕಸಿದದ್ದು ಕಾಂಗ್ರೆಸ್ ಮತ್ತು ಎಡಪಕ್ಷಗಳ ಮತ ಪ್ರಮಾಣ. 2016ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.12.25 ಓಟ್ ಶೇರ್ ಪಡೆದಿತ್ತು. ಆದರೆ 2019ರಲ್ಲಿ ಕಾಂಗ್ರೆಸ್‌ನ ಮತ ಪ್ರಮಾಣ ಶೇ.5.6ಕ್ಕೆ ಕುಸಿಯಿತು. ಹಾಗೆಯೇ ಸಿಪಿಎಂ ಓಟ್ ಶೇರ್ ಕೂಡ 2016ರಲ್ಲಿ ಶೇ.19.75ರಷ್ಟಿತ್ತು. ಅದೇ 2019ರ ಲೋಕಸಭೆ ಚುನಾವಣೆಯಲ್ಲಿ ಎಡಪಕ್ಷಗಳು ಪಡೆದ ಓಟ್ ಶೇರ್ ಕೇವಲ ಶೇ.7.5 ಮಾತ್ರ. ಆದರೆ ಒಂದು ಸ್ಥಾನವನ್ನೂ° ಎಡಪಕ್ಷಗಳು ಗೆಲ್ಲಲಾಗಲಿಲ್ಲ.
ಹೀಗಾಗಿ ಬಿಜೆಪಿ 2011ರಿಂದ 2019ರ ನಡುವಿನಲ್ಲಿ ಸಂಪೂರ್ಣವಾಗಿ ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಓಟ್ ಶೇರ್ ಅನ್ನು ಕಸಿದುಕೊಂಡಿತು ಎಂಬುದನ್ನು ನಿರಾಯಾಸವಾಗಿ ಹೇಳಬಹುದು. ಹಾಗಾದರೆ 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಈ ಎರಡು ಪಕ್ಷಗಳೇ ಮತದಾರರು ಶಕ್ತಿ ತುಂಬಿದರೆ ಸಾಕಾಗುತ್ತಾ? ಈ ಪ್ರಶ್ನೆಗೆ ಇಲ್ಲ ಎಂದೇ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಾರೆ.
2019ರಲ್ಲಿನ ಮತಗಳಿಕೆ ಬಿಜೆಪಿ ಪಾಲಿಗೆ ಅಸಾಧಾರಣ ಶಕ್ತಿ ತಂದುಕೊಟ್ಟಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಕಾರಣ ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಮತಗಳು ತಮ್ಮ ಕಡೆಗೆ ಬಂದದ್ದು ಎಂಬುದು ಬಿಜೆಪಿಗೆ ಗೊತ್ತಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ಇದಕ್ಕೂ ಮಿಗಿಲಾದ ಪ್ಲ್ರಾನ್ ಮಾಡಬೇಕು ಎಂದು ಹೊರಟಿರುವ ಬಿಜೆಪಿ, ಟಿಎಂಸಿಯ ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಹೊರಟಿದೆ. ಇದರ ಅಂಗವಾಗಿಯೇ ಟಿಎಂಸಿಯ ನಂಬರ್ 2 ಎಂದೇ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಬಿಜೆಪಿಯತ್ತ ಬಂದಿದ್ದು. ಇತ್ತೀಚಿನ ಅಮಿತ್ ಶಾ ಅವರ ಪಶ್ಚಿಮ ಬಂಗಾಲದ ಪ್ರವಾಸದ ವೇಳೆ ಸುವೇಂದು ಅಧಿಕಾರಿ ಜತೆಗೆ ಟಿಎಂಸಿ, ಎಡಪಕ್ಷಗಳು ಮತ್ತು ಕಾಂಗ್ರೆಸ್‌ನ ಒಟ್ಟು 10 ಮಂದಿ ಶಾಸಕರು ಹಾಗೂ ಒಬ್ಬ ಸಂಸದರು ಬಿಜೆಪಿಗೆ ಸೇರಿದ್ದಾರೆ. ಜತೆಗೆ ಜಿಲ್ಲಾ ಪಂಚಾಯತ್, ಕೌನ್ಸಿಲ್‌ಗಳ ಮುಖಂಡರೂ ಬಿಜೆಪಿಯತ್ತ ವಾಲಿದ್ದಾರೆ.
ಸುವೇಂದು ಅಧಿಕಾರಿ ಟಿಎಂಸಿ ತೊರೆದದ್ದು ಟಿಎಂಸಿ ಪಾಲಿಗೆ ಬಹುದೊಡ್ಡ ಹೊಡೆತ. ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನಕ್ಕೆ ಬಹು ದೊಡ್ಡ ತಿರುವು ಕೊಟ್ಟ ನಂದಿಗ್ರಾಮ ಪ್ರತಿಭಟನೆಯ ರೂವಾರಿ ಈ ಸುವೇಂದು ಅಧಿಕಾರಿ. ಅಷ್ಟೇ ಅಲ್ಲ, 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಇವರ ಪ್ರಭಾವ ಬಹಳಷ್ಟಿದೆ. ಬಿಜೆಪಿಯ ಈ ಎಲ್ಲ ಪ್ಲ್ಯಾನ್‌ಗಳಿಗೆ ಉತ್ತರವಾಗಿ ಮಮತಾ ಬ್ಯಾನರ್ಜಿ ಸ್ಥಳೀಯ ಮತ್ತು ಹೊರಗಿನ ವ್ಯಕ್ತಿಗಳು ಎಂಬ ಕಾರ್ಡ್ ಬಳಕೆ ಮಾಡಲು ಹೊರಟಿದ್ದಾರೆ. ಬಿಜೆಪಿಯವರನ್ನು ಸಂಪೂರ್ಣವಾಗಿ ಹೊರಗಿನವರು ಎಂದು ಕರೆಯುತ್ತಿರುವ ದೀದಿ, ಪಶ್ಚಿಮ ಬಂಗಾಲದ ಜನರಲ್ಲಿ ಸ್ವಾಭಿಮಾನದ ಕಿಚ್ಚು ಹೊತ್ತಿಸಲು ಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪಕ್ಕಾ ಹೋರಾಟಗಾರ್ತಿಯಾಗಿರುವ ಮಮತಾ ಬ್ಯಾನರ್ಜಿ, ನಡ್ಡಾ ಕಾರಿನ ಮೇಲಿನ ಕಲ್ಲೇಟು ಪ್ರಕರಣದ ಅನಂತರ ಕೇಂದ್ರ ಸರಕಾರದ ವಿರುದ್ಧ ಮುಗಿಬೀಳುತ್ತಿದ್ದಾರೆ. ಬೇರೊಬ್ಬರು ನಮ್ಮ ರಾಜ್ಯದ ಅಧಿಕಾರದಲ್ಲಿ ಬೇರೊಬ್ಬರು ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿಕೊಂಡು ದೊಡ್ಡ ಮಟ್ಟದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು, ಬಿಜೆಪಿ ಹಾಗೂ ಟಿಎಂಸಿ ನಡುವಿನ ತಿಕ್ಕಾಟದಲ್ಲಿ ಮೂಕಪ್ರೇಕ್ಷಕರಾದಂತೆ ಕಾಣುತ್ತಿದೆ. ಎಡಪಕ್ಷಗಳ ಯಾವುದೇ ನಾಯಕರು ಸದ್ದು ಮಾಡುತ್ತಿಲ್ಲ. ಕಾಂಗ್ರೆಸ್ ಅಧೀರ್ ರಂಜನ್ ಚೌಧರಿ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಸಜ್ಜಾಗಿದೆ. ಆದರೆಇದು ಫಲಕೊಡಲಿದೆ ಎಂಬುದನ್ನು ಕಾದು ನೋಡಬೇಕು ಅಷ್ಟೇ.
ಸೋಮಶೇಖರ ಸಿ.ಜೆ.