Advertisement

ರಾಹುಲ್‌ ರಾಜೀನಾಮೆಗೆ ಬಿಜೆಪಿ ಪಟ್ಟು

06:00 AM Dec 18, 2018 | Team Udayavani |

ಹೊಸದಿಲ್ಲಿ: ರಫೇಲ್‌ ಒಪ್ಪಂದದ ವಿಷಯದಲ್ಲಿ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿ ದೇಶಾದ್ಯಂತ 70 ಸುದ್ದಿಗೋಷ್ಠಿಗಳನ್ನು ನಡೆಸುವ ಮೂಲಕ ಸೋಮವಾರ ವಾಗ್ಧಾಳಿ ನಡೆಸಿದೆ. ಹಲವು ಸಚಿವರು ವಿವಿಧ ನಗರಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ನಡೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಜತೆಗೆ, ಸುಳ್ಳು ಮಾಹಿತಿ ನೀಡಿದ ರಾಹುಲ್‌ ಗಾಂಧಿ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.

Advertisement

ವಿಪಕ್ಷವು ಗೊತ್ತಿದ್ದೂ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ಮುಂಬೈನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ. ರಫೇಲ್‌ ಡೀಲ್‌ ವಿಷಯದಲ್ಲಿ ಸರಕಾರ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೂ, ಕಾಂಗ್ರೆಸ್‌ ವಾಗ್ಧಾಳಿ ಮುಂದುವರಿಸಿದೆ. ನಾವು ಮಹಾ ಲೇಖಪಾಲರಿಗೆ ಬೆಲೆಯ ವಿವರಗಳನ್ನು ನೀಡಿದ್ದೇವೆ. ಈ ವಿವರಗಳನ್ನು ಮಹಾ ಲೇಖಪಾಲರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡುತ್ತಾರೆ. ಅವರು ಇದನ್ನು ವಿಶ್ಲೇಷಣೆ ನಡೆಸುತ್ತಾರೆ ಎಂದು ನಿರ್ಮಲಾ ಹೇಳಿದ್ದಾರೆ. ರಫೇಲ್‌ ಕುರಿತು ರಾಹುಲ್‌ ಹೇಳುತ್ತಿದ್ದ ಸುಳ್ಳುಗಳು ಈಗ ಬಯಲಾಗಿವೆ ಎಂದು ಸಚಿವೆ ಸ್ಮತಿ ಇರಾನಿ ಕೋಲ್ಕತ್ತಾದಲ್ಲಿ ಆರೋಪಿಸಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್‌ ಆಟವಾಡುತ್ತಿದೆ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ರಾಹುಲ್‌ಗೆ ಪ್ರತಿಭಟನೆಯ ಬಿಸಿ: ಪುದುಚೇರಿಯಲ್ಲಿ ರಾಹುಲ್‌ಗೆ ಪ್ರತಿಭಟನೆಯ ಬಿಸಿ ಸೋಕಿದೆ. ರಫೇಲ್‌ ವಿಚಾರದಲ್ಲಿ ರಾಹುಲ್‌ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ 100ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹಕ್ಕುಚ್ಯುತಿ ನಿರ್ಣಯಕ್ಕೆ ಆಗ್ರಹ: ರಫೇಲ್‌ ವಿಷಯಕ್ಕೆ ಸಂಬಂಧಿಸಿ ಕೋರ್ಟ್‌ಗೆ ಸರಕಾರ ತಪ್ಪು ಮಾಹಿತಿ ನೀಡಿದೆ ಎಂದು ಆರೋಪಿಸಿದ ಕಾಂಗ್ರೆಸ್‌, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಕೈಗೊಳ್ಳಲು ಆಗ್ರಹಿಸಿದೆ. ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೋಟಿಸ್‌ ನೀಡಿದ್ದು, ಈ ವಿಚಾರ ಪರಿಗಣ ನೆಯಲ್ಲಿದೆ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ.

ರಾಹುಲ್‌ ವಿರುದ್ಧ ಹಕ್ಕುಚ್ಯುತಿ: ಹಿಂದಿನ ಅಧಿವೇಶನದಲ್ಲಿ ರಫೇಲ್‌ ವಿಚಾರಕ್ಕೆ ಸಂಬಂಧಿಸಿ ರಾಹುಲ್‌ ಸದನಕ್ಕೆ ಸುಳ್ಳು ಹೇಳಿದ್ದು, ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಬೇಕು ಎಂದು ಮೂವರು ಬಿಜೆಪಿ ಸಂಸದರು ಲೋಕ ಸಭೆ ಸ್ಪೀಕರ್‌ಗೆ ನೋಟಿಸ್‌ ನೀಡಿದ್ದಾರೆ. ಸಂಸದ ಅನುರಾಗ್‌ ಥಾಕೂರ್‌, ನಿಶಿಕಾಂತ್‌ ದುಬೆ ಹಾಗೂ ಸಂಜಯ್‌ ಜೈಸ್ವಾಲ್‌ ನೋಟಿಸ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next