Advertisement

ಮೋದಿ ಸರ್ಕಾರಕ್ಕೆ 8ರ ಸಂಭ್ರಮ; ಇಂದಿನಿಂದ ದೇಶವ್ಯಾಪಿ 2 ವಾರ ಬಿಜೆಪಿ ಕಾರ್ಯಕ್ರಮ

10:01 AM May 30, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೋಮವಾರಕ್ಕೆ ಬರೋಬ್ಬರಿ 8 ವರ್ಷಗಳನ್ನು ಪೂರ್ಣಗೊಳಿಸಿದೆ.

Advertisement

ಮೊದಲ ಅವಧಿಯಲ್ಲಿ 5 ವರ್ಷ ಮತ್ತು ಎರಡನೇ ಅವಧಿಯಲ್ಲಿ 3 ವರ್ಷದ ಆಡಳಿತ ಪೂರ್ಣಗೊಂಡಿದ್ದು, ಬಿಜೆಪಿಯಲ್ಲಿ 8ನೇ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿದೆ.

“ನವಭಾರತ’ ಹಾಗೂ “ಒಳ್ಳೆಯ ದಿನ’ಗಳ ಕನಸಿನೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಅವರು ಕಳೆದ 8 ವರ್ಷಗಳಲ್ಲಿ ರೈತರಿಂದ ಹಿಡಿದು ಕೂಲಿ ಕಾರ್ಮಿಕರು, ಮಧ್ಯಮ ವರ್ಗ, ಉದ್ಯಮಿಗಳವರೆಗೆ ಎಲ್ಲ ವರ್ಗದವರ ಏಳಿಗೆಗಾಗಿ ಶ್ರಮಿಸಿದ್ದಾರೆ. ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ದೇಶವಾಸಿಗಳ ಜೀವನಮಟ್ಟ ಸುಧಾರಣೆಗೆ ಪ್ರಯತ್ನಿಸಿದ್ದಾರೆ.

ಕೊರೊನಾ ಬಿಕ್ಕಟ್ಟು ನಿರ್ವಹಣೆ, ನಾಗರಿಕರಿಗೆ ಉಚಿತ ಲಸಿಕೆ ವಿತರಣೆ, ಬಡವರಿಗೆ ರಿಯಾಯ್ತಿ ದರದಲ್ಲಿ ಆಹಾರಧಾನ್ಯ ಪೂರೈಕೆ, ತ್ರಿವಳಿ ತಲಾಖ್‌ ರದ್ದು, ಆತ್ಮನಿರ್ಭರ ಭಾರತ ನಿರ್ಮಾಣದವರೆಗೆ ಅವರು ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಸರ್ಕಾರ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜೂ.14ರವರೆಗೆ ದೇಶವ್ಯಾಪಿ ಜನಸಂಪರ್ಕ ಕಾರ್ಯಕ್ರಮಗಳನ್ನು ಬಿಜೆಪಿ ಹಮ್ಮಿಕೊಂಡಿದೆ. ಮೋದಿ ಅವರು ಸೋಮವಾರ ಶಿಮ್ಲಾದಲ್ಲಿ ರೋಡ್‌ ಶೋ ಹಾಗೂ ರ್ಯಾಲಿ ನಡೆಸಲಿದ್ದಾರೆ.

8 ವರ್ಷ; 8 ಪ್ರಮುಖ ಸಾಧನೆ
– ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಕಾಯ್ದೆ ಅನುಷ್ಠಾನ
– ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ(370ನೇ ವಿಧಿ) ರದ್ದು
– ಪಿಎಂ-ಕಿಸಾನ್‌ ಯೋಜನೆ ಮೂಲಕ ರೈತರಿಗೆ ವಾರ್ಷಿಕ 6 ಸಾವಿರ ರೂ. ಸಹಾಯಧನ
– ಪ್ರಧಾನಮಂತ್ರಿ ಜನಧನ ಯೋಜನೆ
– ಜೀವನಜ್ಯೋತಿ ವಿಮೆ ಯೋಜನೆ ಮತ್ತು ಸುರಕ್ಷಾ ವಿಮೆ ಯೋಜನೆ
– ಸಣ್ಣ ಉದ್ದಿಮೆದಾರರಿಗೆ ಸಾಲ ನೀಡುವ ಮುದ್ರಾ ಯೋಜನೆ
– ಆಯುಷ್ಮಾನ್‌ ಭಾರತ ಯೋಜನೆ
– ಅಟಲ್‌ ಪಿಂಚಣಿ ಯೋಜನೆ

Advertisement

ಮೈಸೂರಿನ ಕಲ್ಪನಾಳ ಯಶೋಗಾಥೆ
ಇತ್ತೀಚೆಗೆ ಮೈಸೂರಿನಲ್ಲಿ 10ನೇ ತರಗತಿ ತೇರ್ಗಡೆ ಹೊಂದಿದ ಕಲ್ಪನಾ ಎಂಬ ಬಾಲಕಿಯು, ಆಕೆಯ ಶ್ರಮದ ಹಿನ್ನೆಲೆಯಿಂದಾಗಿ ಪ್ರಧಾನಿ ಮೋದಿ ಅವರ ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದಾಳೆ. “ಹಲವು ಭಾಷೆ, ಲಿಪಿ ಮತ್ತು ಉಪಭಾಷೆಗಳ ಖಜಾನೆಯಾದ ಭಾರತಕ್ಕೆ ವೈವಿಧ್ಯತೆಯೇ ಶಕ್ತಿ’ ಎಂದು ಹೇಳಿರುವ ಪ್ರಧಾನಿ ಮೋದಿ, ಅದಕ್ಕೆ ಉದಾಹರಣೆಯಾಗಿ ಕಲ್ಪನಾಳ ಕಥೆಯನ್ನು ವಿವರಿಸಿದ್ದಾರೆ. ಮೈಸೂರಿನ ಕಲ್ಪನಾ, “ಏಕ ಭಾರತ, ಶ್ರೇಷ್ಠ ಭಾರತ’ ಪರಿಕಲ್ಪನೆಯ ಸಾಕ್ಷಿಪ್ರಜ್ಞೆ. ಆಕೆಗೆ ಕನ್ನಡವೇ ಬರುತ್ತಿರಲಿಲ್ಲ. ಏಕೆಂದರೆ, ಆಕೆ ಉತ್ತರಾಖಂಡದ ಜೋಷಿಮಠದವಳು. ಆದರೆ, ಕೇವಲ 3 ತಿಂಗಳಲ್ಲಿ ಕನ್ನಡ ಕಲಿತಿದ್ದಲ್ಲದೇ, ಕನ್ನಡದಲ್ಲಿ 92 ಅಂಕಗಳನ್ನು ಗಳಿಸಿದ್ದಾಳೆ. ಕ್ಷಯರೋಗದಿಂದ ಬಳಲುತ್ತಿದ್ದ ಕಲ್ಪನಾ, 3ನೇ ತರಗತಿಗೆ ಬಂದಾಗ ದೃಷ್ಟಿಯನ್ನೂ ಕಳೆದುಕೊಂಡಳು. ಮೈಸೂರಿನ ಪ್ರೊಫೆಸರ್‌ ತಾರಾಮೂರ್ತಿ ಅವರ ಸಹಾಯ ಮತ್ತು ಪ್ರೇರಣೆಯಿಂದ ಹಾಗೂ ತನ್ನ ಪರಿಶ್ರಮದಿಂದ ಕಲ್ಪನಾ ಈಗ ಇಂಥ ಸಾಧನೆ ಮಾಡಿದ್ದಾಳೆ. ಆಕೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next