ಹೊಸದಿಲ್ಲಿ: ಇತ್ತೀಚೆಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಅಸ್ಸಾಂನಲ್ಲಿ ಮಂಗಳವಾರ ಒಂದೇ ದಿನ ಸಾವಿರಕ್ಕೂ ಹೆಚ್ಚು ಪೊಲೀಸ್ ದೂರುಗಳು ದಾಖಲಾಗಿವೆ ಎಂದು ಅಸ್ಸಾಂ ಬಿಜೆಪಿಯ ಯುವ ಮೋರ್ಚಾ ತಿಳಿಸಿದೆ.
ಮೋರ್ಚಾದ ಸಾವಿರಾರು ಕಾರ್ಯ ಕರ್ತರು ಒಗ್ಗೂಡಿ ರಾಹುಲ್ ಗಾಂಧಿ ವಿರುದ್ಧ 1,000ಕ್ಕೂ ಹೆಚ್ಚು ದೂರುಗಳನ್ನು ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ್ದಾರೆ ಎಂದು ಮೋರ್ಚಾ ಹೇಳಿದೆಯಾದರೂ, ಯಾವ ಪೊಲೀಸ್ ಠಾಣೆಗಳಲ್ಲಿ ಎಷ್ಟೆಷ್ಟು ದೂರುಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ನೀಡಿಲ್ಲ.
ರಾಹುಲ್ ಗಾಂಧಿಯವರು ಇತ್ತೀಚೆಗೆ ಭಾರತದ ಉದ್ದಗಲಗಳ ಬಗ್ಗೆ ಟ್ವೀಟ್ ಮಾಡಿ, ಕಾಶ್ಮೀರದಿಂದ ಕೇರಳದ ವರೆಗೆ, ಗುಜರಾತ್‌ನಿಂದ ಪಶ್ಚಿಮ ಬಂಗಾಲದವರೆಗೆ ಹರಡಿದೆ ಎಂದಿದ್ದರು. ಈ ಟ್ವೀಟ್‌ನಲ್ಲಿ ಈಶಾನ್ಯ ಭಾಗದ ರಾಜ್ಯಗಳನ್ನು ರಾಹುಲ್ ಉದ್ದೇಶಪೂರ್ವಕವಾಗಿ ಸೇರಿಸಿಲ್ಲ ಎಂದು ಆಕ್ಷೇಪಿಸಿ ಈ ದೂರು ಆಂದೋಲನ ನಡೆಸಲಾಗಿದೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 7 ಹೊಸ ಸರ್ಕಾರಿ ಆಸ್ಪತ್ರೆ
ದೂರುಗಳ ಕುರಿತಂತೆ ಹೆಚ್ಚುವರಿ ಮಾಹಿತಿ ನೀಡಿರುವ ಅಸ್ಸಾಂ ಪೊಲೀಸ್ ಇಲಾಖೆಯ ವಿಶೇಷ ಮಹಾ ನಿರ್ದೇಶಕರು, ಅಸ್ಸಾಂನಲ್ಲಿ 329 ಪೊಲೀಸ್ ಠಾಣೆಗಳು, 293 ಔಟ್ ಪೋಸ್ಟ್‌ಗಳು ಹಾಗೂ 151 ಗಸ್ತು ಪೋಸ್ಟ್‌ಗಳು ಇವೆ. ಇವೆಲ್ಲವುಗಳಲ್ಲಿ ದೂರು ನೀಡಬಹುದಾಗಿದೆ. ಆದರೆ ದೂರು ನೋಂದಣಿ ಪೊಲೀಸ್ ಠಾಣೆಗಳಲ್ಲಿ ಮಾತ್ರ ಜರಗುತ್ತದೆ ಎಂದಿದ್ದಾರೆ.