ಮೂಲ್ಕಿ: ಸುರತ್ಕಲ್‌ನ ಟೋಲ್ ವಿರುದ್ಧ ಪ್ರತಿಭಟನೆಗೆ ಮೂಲ್ಕಿ ಮೂಡಬಿದಿರೆಯ ಬಿಜೆಪಿ ಕ್ಷೇತ್ರ ಸಮಿತಿ ಸಂಪೂರ್ಣವಾಗಿ ಬೆಂಬಲ ನೀಡಿ ಸ್ವತಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮೂಲ್ಕಿ ಮೂಡಬಿದಿರೆ ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಈಶ್ವರ ಕಟೀಲು ಹೇಳಿದರು.
ಅವರು ಇಂದು ಮೂಲ್ಕಿ ಸ್ವಾಗತ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ, ಅವೈಜ್ಞಾನಿಕ ಹಾಗೂ ಮೂಲಬೂತ ಸೌಕರ್ಯ ಇಲ್ಲದ ಟೋಲ್ ಕೇಂದ್ರವನ್ನು ಬಂದ್ ಮಾಡಬೇಕು ಎಂಬ ಹೋರಾಟ ನಡೆಸುತ್ತಿರುವ ನಡುವೆ ಬಿಡ್ ಅವಧಿ ಮುಂದಿನ ಎರಡು ತಿಂಗಳು ಇರುವಾದ ಕೇಶವ ಅಗರ್‌ವಾಲ್ ಕಂಪೆನಿಯು ದಕ್ಷಿಣ ಕನ್ನಡ ಜಿಲ್ಲಾ ನೋಂದಣಿಯ ಎಲ್ಲಾ ವಾಹನಗಳಿಗೆ ಟೋಲ್ ಪಡೆಯಲು ಜಿಲ್ಲಾಡಳಿತದ ಮೂಲಕ ಪೊಲೀಸ್ ಬಲದಲ್ಲಿ ಸಂಗ್ರಹ ಮಾಡಲು ಉದ್ದೇಶಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯಲಿದೆ ಎಂದರು.
ಬಿಡ್ ದಾರರಿಗೆ ನಷ್ಟ ಉಂಟಾದಲ್ಲಿ ಜನರ ಮೇಲೆ ಸವಾರಿ ಮಾಡುವ ಬದಲು ಬಿಡ್‌ನಿಂದ ನಿವೃತ್ತಿಯಾಗಲಿ, ಟೋಲ್ ಆರಂಭದ ಸರ್ವೇಯಲ್ಲಿಯೇ ಸ್ಥಳೀಯರ ವಾಹನಕ್ಕೆ ಶುಲ್ಕ ಪಡೆಯಬಾರದು ಎಂಬ ನಿಯಮವಿದೆ. ಗುತ್ತಿಗೆದಾರ ಹೆದ್ದಾರಿ ಪ್ರಾಧಿಕಾರದ ಮೇಲೆ ತನ್ನ ವಶೀಲಿ ಬಾಜಿ ನಡೆಸಿ ಜಿಲ್ಲಾಡಳಿತಕ್ಕೆ ಒತ್ತಡ ತಂದಿರುವುದು ಸರಿಯಲ್ಲ. ನಾಲ್ಕು ವರ್ಷದ ಹಿಂದೆ ಇದೇ ಪರಿಸ್ಥಿತಿ ನಿರ್ಮಾಣವಾದಾಗ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಯಥಾಸ್ಥಿತಿ ನಿರ್ಮಾಣ ಮಾಡಲು ಸೂಚನೆ ನೀಡಿರುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಸ್ತೂರಿ ಪಂಜ, ಜಯಾನಂದ ಮೂಲ್ಕಿ, ದೇವಪ್ರಸಾದ ಪುನರೂರು, ವಿನೋದ್ ಬೊಳ್ಳೂರು, ಸತೀಶ್ ಅಂಚನ್, ದಯಾವತಿ, ವಂದನಾ ಕಾಮತ್, ಸುನಿಲ್ ಆಳ್ವಾ, ಸಂತೋಷ್ ಶೆಟ್ಟಿ, ಮಧುಸೂಧನ್ ಶೆಟ್ಟಿಗಾರ್, ನಾಗರಾಜ್ ಕುಲಾಲ್ ಇದ್ದರು.