ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸಲು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ, ಜನಸ್ವರಾಜ್ ಯಾತ್ರೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಮಂಡಲ ಮಟ್ಟದಿಂದ ಸಕ್ರಿಯವಾಗಿ ಭಾಗವಹಿಸುವಂತೆಯೂ ಸೂಚನೆ ನೀಡಲಾಗಿದೆ.
ವಿಧಾನಪರಿಷತ್, ಜಿಲ್ಲಾ ಮತ್ತು ತಾಲೂಕು ಪಂಚಾ ಯತ್ ಹಾಗೂ ಬಿಬಿಎಂಪಿ ಸೇರಿದಂತೆ ಮುಂದಿನ ದಿನ ಗಳಲ್ಲಿ ಎದುರಾಗುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸುವುದು ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಿರ್ಧರಿಸಲಾಗಿದೆ.
ರಾಜ್ಯ ಕಾರ್ಯಕಾರಿಣಿ ಡಿ. 18 ಹಾಗೂ 19ರಂದು ಹುಬ್ಬಳ್ಳಿಯಲ್ಲಿ ನಡೆಸಲು ಸಹ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖ್ಯ ವಕ್ತಾರ ಕ್ಯಾ| ಗಣೇಶ್ ಕಾರ್ಣಿಕ್, ವಿಧಾನಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಕ್ಷ ಶ್ರಮಿಸಬೇಕು ಎಂಬ ಸಂದೇಶವನ್ನು ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ನೀಡಿದೆ ಎಂದು ಹೇಳಿದರು.ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರು ಸಭೆ ಉದ್ಘಾಟಿಸಿ ಮುಂಬರುವ ಚುನಾವಣೆಗಳ ಪ್ರಾಮುಖ್ಯತೆ ಬಗ್ಗೆ ಪ್ರಸ್ತಾಪಿಸಿದರು.
ಇದನ್ನೂ ಓದಿ:ಉ.ಪ್ರ. ಚುನಾವಣೆ: ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ: ಮಾಯಾವತಿ
ಕೇಂದ್ರ ಸರಕಾರಕ್ಕೆ ಕೃತಜ್ಞತೆ
ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ 107 ಕೋಟಿ ಕೋವಿಡ್ ಲಸಿಕೆ ನೀಡಿದ ಹಾಗೂ ಮಾದರಿ ನಿರ್ವಹಣೆಗಾಗಿ ಕೇಂದ್ರ ಸರಕಾರ ಮತ್ತು ಪ್ರಧಾನಿಯವರಿಗೆ ಧನ್ಯವಾದ ಸಮರ್ಪಿಸಲಾಯಿತು. ಪೇಜಾವರ ಶ್ರೀ, ಹಾಜಬ್ಬ ಸೇರಿದಂತೆ ರಾಜ್ಯಕ್ಕೆ 9 ಪದ್ಮ ಪ್ರಶಸ್ತಿಗಳನ್ನು ನೀಡಿದ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಲಾಯಿತು.