Advertisement

ಮುಖ್ಯಮಂತ್ರಿ ಹೇಳಿಕೆ ಖಂಡಿಸಿ ದ.ಕ., ಉಡುಪಿ ಬಿಜೆಪಿ ಪ್ರತಿಭಟನೆ

09:44 AM Sep 22, 2018 | Team Udayavani |

ಮಂಗಳೂರು: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರವನ್ನು ಅವರ ನಾಯಕರ ನಡುವಿನ ಒಳಜಗಳದಿಂದಾಗಿ ಸಮರ್ಥವಾಗಿ ಮುನ್ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಾಧ್ಯವಾಗುತ್ತಿಲ್ಲ. ಅದನ್ನು ಬಿಜೆಪಿ ವಿರುದ್ಧ ಏನೇನೋ ಹೇಳಿಕೆಗಳ ಮೂಲಕ ತೋರಿಸುತ್ತಿದ್ದಾರೆ. ಅವರ ಹೇಳಿಕೆ ಖಂಡನೀಯ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸುಳ್ಯ ಶಾಸಕ ಎಸ್‌. ಅಂಗಾರ ಮಾತನಾಡಿ, ಕುಮಾರಸ್ವಾಮಿ ತೀವ್ರ ಹತಾಶೆಗೊಂಡು ದಂಗೆಗೆ ಕರೆ ನೀಡಿದ್ದಾರೆ. ಉತ್ತಮ ಆಡಳಿತ ಸಾಧ್ಯವಿಲ್ಲ ಎಂಬುದು ಇದರಿಂದ ದೃಢವಾಗಿದೆ. ಮುಖ್ಯಮಂತ್ರಿ ತಮ್ಮ ಮಾತನ್ನು ಹಿಂಪಡೆಯಬೇಕು ಎಂದರು.

ಅರಾಜಕತೆ ಸೃಷ್ಟಿ
ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌ ಮಾತನಾಡಿ, ಮುಖ್ಯಮಂತ್ರಿ ಹೇಳಿಕೆಯಿಂದ ರಾಜ್ಯದಲ್ಲಿ ಅರಾಜ ಕತೆ ಸೃಷ್ಟಿಯಾಗಿದ್ದು, ತತ್‌ಕ್ಷಣ ರಾಜ್ಯ ಪಾಲರು ಮಧ್ಯ ಪ್ರವೇಶಿಸಬೇಕು. ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿ ರಾಜ್ಯದ ಜನತೆಯ ಮೇಲೆ ತೀವ್ರ ಪರಿಣಾಮ ಬೀಳುತ್ತದೆ. ಇದಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ನೇರ ಹೊಣೆ ಎಂದು ಹೇಳಿದರು.

ದುರುದ್ದೇಶ
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಮಾತನಾಡಿ, ಯಡಿಯೂರಪ್ಪ ಸಿಎಂ ಆಗಬಾರದು ಎಂಬ ದುರುದ್ದೇಶದಿಂದ ಕುಮಾರ ಸ್ವಾಮಿ ದಂಗೆಗೆ ಕರೆ ನೀಡಿದ್ದಾರೆ. ಇದು ಹತಾಶೆಯ ರಾಜಕಾರಣ. ಸಮ್ಮಿಶ್ರ ಸರಕಾರದ ಆಡಳಿತದಿಂದ ಬೇಸತ್ತು ಅವರ ಶಾಸಕರು ಬಿಜೆಪಿ ಕಡೆಗೆ ಬರಲು ಉತ್ಸುಕರಾಗಿದ್ದಾರೆ ಎಂದರು. ಶಾಸಕ ಡಾ| ವೈ. ಭರತ್‌ ಶೆಟ್ಟಿ, ಮುಖಂಡ ರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ಕ್ಯಾ| ಬೃಜೇಶ್‌ ಚೌಟ, ಸಂದೇಶ್‌ ಶೆಟ್ಟಿ, ಪೂಜಾ ಪೈ, ಪ್ರಭಾ ಮಾಲಿನಿ, ಪ್ರಸಾದ್‌ ಕುಮಾರ್‌, ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಜಯ ಪ್ರಭು, ಡಾ| ಅಣ್ಣಯ್ಯ ಕುಲಾಲ್‌, ಶಶಿರಾಜ್‌ ಶೆಟ್ಟಿ ಕೊಳಂಬೆ, ರಾಮ ಅಮೀನ್‌ ಪಚ್ಚನಾಡಿ, ಚಂದ್ರಹಾಸ ಉಳ್ಳಾಲ, ಚಂದ್ರಹಾಸ್‌ ಉಚ್ಚಿಲ್‌, ಪಮ್ಮಿ ಕೊಡಿಯಾಲಬೈಲ್‌, ವಸಂತ ಪೂಜಾರಿ ಭಾಗವಹಿಸಿದ್ದರು.

ಕುಮಾರಸ್ವಾಮಿ ಮುಖ್ಯಮಂತ್ರಿ ನಕ್ಸಲ್‌: ಸುನಿಲ್‌
ಉಡುಪಿ: ದಂಗೆಗೆ ಕರೆ ಕೊಡುವುದು ನಕ್ಸಲರ ಕೃತ್ಯ. ಮುಖ್ಯಮಂತ್ರಿಗಳಾಗಿ ದಂಗೆಗೆ ಕರೆ ಕೊಡುತ್ತಿರುವ ಕುಮಾರಸ್ವಾಮಿ ನಗರದ ನಕ್ಸಲರಂತೆ. ಅವರು ಮುಖ್ಯಮಂತ್ರಿ ನಕ್ಸಲ್‌ ಎಂದು ವಿಧಾನಸಭೆಯ ವಿಪಕ್ಷದ ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಹೇಳಿದರು.


ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಶುಕ್ರವಾರ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕುಮಾರಸ್ವಾಮಿ ಓಟಿನ ರಾಜಕೀಯ ನಡೆಸುತ್ತಿದ್ದಾರೆ. ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಮುಸಲ್ಮಾನರು ಓಟು ಹಾಕಿಲ್ಲ ಅದಕ್ಕೆ ಮಂತ್ರಿಮಂಡಲದಲ್ಲಿ ಅವರಿಗೆ ಜಾಗ ಇಲ್ಲ ಎಂದಿದ್ದರು. ಬಜೆಟ್‌ ಮಂಡನೆ ಸಂದರ್ಭ ಉತ್ತರ ಕರ್ನಾಟಕಕ್ಕೆ ಯೋಜನೆ ಘೋಷಿಸದೇ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಸಂದರ್ಭ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುವಂತೆ ಮಾರ್ಮಿಕವಾಗಿ ಮಾತನಾಡಿದ್ದರು. ಈಗ ದಂಗೆ ಹೇಳಿಕೆ ನೀಡಿ ಅಧಿಕಾರ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ  ದೇವೇ ಗೌಡರು ದೊಂಬಿ ಎಬ್ಬಿಸಿ ಮುಖ್ಯಮಂತ್ರಿ ಆಗಿದ್ದರು. ಈಗ ಕುಮಾರಸ್ವಾಮಿಯವರು ಅದೇ ಮಾರ್ಗ ಹಿಡಿದಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಪೊಲೀಸ್‌ ವ್ಯವಸ್ಥೆ ಅನಗತ್ಯ
ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯಾಗಿ ದಂಗೆ ಏಳಲು ಕರೆ ನೀಡುವಿರಾದರೆ ಕರ್ನಾಟಕದಲ್ಲಿ ಪೊಲೀಸರೇಕೆ? ಪೊಲೀಸರನ್ನೆಲ್ಲ ಮನೆಗೆ ಕಳುಹಿಸಿ, ರಾಜ್ಯವನ್ನು ದಂಗೆಕೋರರ ಸಂಘ ಮಾಡಿ ದಂಗೆಕೋರ ಮುಖ್ಯಮಂತ್ರಿಯಾಗಿ ಬಿಡಿ ಎಂದು ಲೇವಡಿ ಮಾಡಿದರು. ದಂಗೆ ಏಳಲು ಕರೆ ನೀಡುವಿರಾದರೆ, ನೀವು ಈ ಮುಖ್ಯಮಂತ್ರಿಸ್ಥಾನದಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ನಿಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ಪ್ರಾಮಾಣಿಕತೆ ಇದ್ದರೆ ತತ್‌ಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರ ಹಿಸಿದರು. ಶಾಸಕ ರಘುಪತಿ ಭಟ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ಯಾಮಲಾ ಕುಂದರ್‌ ಪ್ರಸ್ತಾವನೆಗೈದರು. 

Advertisement

Udayavani is now on Telegram. Click here to join our channel and stay updated with the latest news.

Next