Advertisement

BJP; ಶಿಸ್ತುಕ್ರಮದಿಂದ ಎಸ್‌.ಟಿ.ಸೋಮಶೇಖರ್‌, ಹೆಬ್ಬಾರ್‌ ಪಾರು?

10:51 PM Feb 28, 2024 | Team Udayavani |

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕ ಎಸ್‌.ಟಿ.ಸೋಮಶೇಖರ್‌ ಹಾಗೂ ಗೈರು ಹಾಜರಾದ ಶಿವರಾಂ ಹೆಬ್ಬಾರ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಶುಕ್ರವಾರ ಬಿಜೆಪಿ ನಿರ್ಧಾರ ತೆಗೆದುಕೊಳ್ಳಲಿದ್ದು, ಈ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

Advertisement

ಬಿಜೆಪಿ ಕಾನೂನು ಘಟಕದ ಅಧ್ಯಕ್ಷ ವಿವೇಕ್‌ ರೆಡ್ಡಿ ಜತೆಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಕಾನೂನಾತ್ಮಕ ಎಲ್ಲ ಮಾರ್ಗಗಳನ್ನು ಹುಡುಕುವಂತೆ ಸೂಚಿಸಿದ್ದಾರೆ. ಶಿವಮೊಗ್ಗ ಪ್ರವಾಸದಲ್ಲಿರುವ ವಿಜಯೇಂದ್ರ ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಸಭೆ ನಡೆಸಿ ಸ್ಪೀಕರ್‌ಗೆ ದೂರು ನೀಡುವ ಸಾಧ್ಯತೆ ಇದೆ. ಆದರೆ ಬಿಜೆಪಿ ಮೂಲಗಳ ಪ್ರಕಾರ ಈ ಇಬ್ಬರು ಶಾಸಕರನ್ನು ಉಚ್ಛಾಟನೆ ಅಥವಾ ಅಮಾನತು ಮಾಡುವ ಸಾಧ್ಯತೆಗಳು ಕ್ಷೀಣಿಸಿದೆ. ನೆಪ ಮಾತ್ರಕ್ಕೆ ಸ್ಪೀಕರ್‌ಗೆ ದೂರು ಕೊಟ್ಟು ಕೈ ತೊಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಒಂಟಿಯಾದ ಸೋಮಶೇಖರ್‌
ಇದೆಲ್ಲದರ ಮಧ್ಯೆ ಶಾಸಕ ಎಸ್‌.ಟಿ.ಸೋಮಶೇಖರ್‌ ಬುಧವಾರ ವಿಧಾನಸಭೆಗೆ ಆಗಮಿಸಿದರು. ಅವರನ್ನು ಬಿಜೆಪಿಯ ಯಾವೊಬ್ಬ ಸದಸ್ಯರೂ ಮಾತನಾಡಿಸಲಿಲ್ಲ. ತಮಗೆ ನಿಗದಿಯಾದ ಸ್ಥಳದಲ್ಲಿ ಕಲಾಪ ಮುಂದೂಡುವವರೆಗೂ ಕುಳಿತಿದ್ದರು. ಆದರೆ ಶಿವರಾಂ ಹೆಬ್ಬಾರ್‌ ಮಾತ್ರ ಕ್ಷೇತ್ರದಲ್ಲೇ ಉಳಿದುಕೊಂಡಿದ್ದಾರೆ.

ಆತ್ಮಸಾಕ್ಷಿ ಮತದಾನ ಮಾಡಿದ್ದಾಗಿ ಹೇಳಿದ್ದ ಸೋಮಶೇಖರ್‌ ಅವರು ಕಲಾಪಕ್ಕೆ ಬರುತ್ತಾರೋ, ಇಲ್ಲವೋ? ಬಂದರೂ ಬಿಜೆಪಿ ಶಾಸಕರ ಜತೆಗೆ ಕುಳಿತುಕೊಳ್ಳುತ್ತಾರಾ ಎನ್ನುವ ಕುತೂಹಲವಿತ್ತು.

ಪಾಕ್‌ ಪರ ಘೋಷಣೆ ವಿಚಾರವಾಗಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಯಶವಂತಪುರ ಬಿಜೆಪಿ ಶಾಸಕ ಸೋಮಶೇಖರ್‌ ಎಂದಿನಂತೆ ವಿಪಕ್ಷ ಸದಸ್ಯರು ಪ್ರವೇಶಿಸುವ ದ್ವಾರದಿಂದ ಸದನಕ್ಕೆ ಬಂದರು. ತಮ್ಮ ಆಸನದಲ್ಲಿ ಹೋಗಿ ಕುಳಿತುಕೊಂಡರು. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ್ದರಿಂದ ಅವರೂ ಯಾರೊಂದಿಗೂ ಮಾತಿಗೆ ಹೋಗಲಿಲ್ಲ. ಅವರನ್ನೂ ಯಾರೊಬ್ಬರೂ ಮಾತನಾಡಿಸಲಿಲ್ಲ. ಸ್ವಲ್ಪ ಹೊತ್ತು ಏಕಾಂಗಿಯಾಗಿ ಕುಳಿತು ಬಳಿಕ ಎದ್ದು ಹೋದರು.

Advertisement

ಸದನಕ್ಕೂ ಬಾರದ ಹೆಬ್ಬಾರ್‌
ಸೋಮಶೇಖರ್‌ ಅವರಂತೆ ಅಡ್ಡಮತದಾನದ ಹಾದಿಯನ್ನೇ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಟಾರ್‌ ಹಿಡಿಯುತ್ತಾರೆ ಎನ್ನುವ ವದಂತಿ ಹರಡಿತ್ತು. ಆದರೆ ಅವರು ಮತದಾನಕ್ಕೆ ಗೈರಾಗಿದ್ದು, ಬುಧವಾರ ಸದನಕ್ಕೂ ಹಾಜರಾಗಲಿಲ್ಲ.

ಆರೋಗ್ಯ ಸಮಸ್ಯೆ
ಆರೋಗ್ಯದ ತೊಂದರೆಯಿಂದ ರಾಜ್ಯಸಭಾ ಚುನಾವಣೆ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದೆ ಹೊರತು ಬೇರೆ ಯಾವ ಕಾರಣವೂ ಇಲ್ಲ. ನಾನು ಬಿಜೆಪಿಯಲ್ಲೇ ಇದ್ದೇನೆ ಎಂದು ಶಾಸಕ ಶಿವರಾಮ ಹೆಬ್ಟಾರ್‌ ಹೇಳಿದ್ದಾರೆ.

ನನ್ನ ಹೆದರಿಸಲು ಯಾವ ಮಗನೂ ಹುಟ್ಟಿಲ್ಲ
ನಾನು ಆತ್ಮಸಾಕ್ಷಿಯ ಮತವನ್ನು ಹಾಕಿದ್ದೇನೆ. ಅದು ಪ್ರಜಾಪ್ರಭುತ್ವ ಕೊಟ್ಟಿರುವ ಹಕ್ಕು. ಅದನ್ನು ಚಲಾಯಿಸಿದ್ದೇನೆ. ಬಿಜೆಪಿಯವರಿಗೆ ಏನೇನು ತಾಕತ್ತಿದೆಯೋ ಅದನ್ನೆಲ್ಲ ಮಾಡಲಿ. ನಾನೇನು ಹೆದರುವುದಿಲ್ಲ ಎಂದು ಶಾಸಕ ಎಸ್‌.ಟಿ. ಸೋಮಶೇಖರ್‌ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹೇಗೆ ರಾಜಕಾರಣ ಮಾಡುತ್ತೇನೋ ನೋಡುತ್ತೇನೆ ಎನ್ನುವವರಿಗೆ ಒಂದೇ ಮಾತು. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಿದ್ದರೂ ಸ್ಪರ್ಧಿಸಬಹುದು. ಸೋಲು-ಗೆಲುವು ಇದ್ದದ್ದೇ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಒಂದಾಗಿ ನನ್ನ ವಿರುದ್ಧ ಕೆಲಸ ಮಾಡಿತ್ತು. 4 ಬಾರಿ ಯಶವಂತಪುರದಲ್ಲಿ ಗೆದ್ದವನು ನಾನು. 20 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನನ್ನು ಹೆದರಿಸಲು ಯಾವ ಮಗನೂ ಹುಟ್ಟಿಲ್ಲ. ನಾನೇನು ಪಾಕಿಸ್ಥಾನದಲ್ಲಿಲ್ಲ. ಇವರಂತೆ ಕಾನೂನು ಬಾಹಿರ ಕೃತ್ಯ ಮಾಡಿಲ್ಲ ಎಂದರು.

ಅವರು ಸುಮ್ಮನಿದ್ದರೆ ನಾನೂ ಸುಮ್ಮನಿರುತ್ತೇನೆ. ಇಲ್ಲದಿದ್ದರೆ, ನಾನೂ ಒಂದೊಂದೇ ಹೊರ ತೆಗೆಯುತ್ತೇನೆ. ಯಡಿಯೂರಪ್ಪ ಅವರನ್ನು 6 ತಿಂಗಳ ಹಿಂದೆ ಕೆಳಗಿಳಿಸಲು ಯಾರ್ಯಾರು ಏನೇನು ಹೇಳಿದ್ದರು ಎಂಬುದೆಲ್ಲ ನನ್ನ ಬಳಿಯೂ ಇದೆ. 3 ವರ್ಷಗಳಿಂದ ಇವರ ಆಟಗಳನ್ನು ನೋಡಿದ್ದೇನೆ. ಯಾವುದಕ್ಕೂ ನಾನು ಹೆದರುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next