ವಿಧಾನಸಭೆ: ಎಚ್.ಎಸ್.ದೊರೆಸ್ವಾಮಿ ಅವರಿಗೆ ಧಿಕ್ಕಾರ ಎಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಹೇಳಿರುವುದನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯತ್ನಾಳ್ ನಂತರ ಇದೀಗ ರವಿಕುಮಾರ್ ಮತ್ತೆ ಅದೇ ರೀತಿಯ ಹೇಳಿಕೆ ನೀಡಿರುವುದು ನೋಡಿದರೆ ಇದರ ಹಿಂದೆ ಸಂಘ ಪರಿವಾರ, ಆರ್‌ಎಸ್‌ಎಸ್‌ನವರ ಕೈವಾಡವಿದೆ ಎಂದು ಹೇಳಿದ ಮಾತು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಸಿದ್ದರಾಮಯ್ಯ ಅವರ ಮಾತಿನಿಂದ ಆಕ್ರೋಶ ಗೊಂಡ ಕೆ.ಎಸ್. ಈಶ್ವರಪ್ಪ, ನರೇಂದ್ರಮೋದಿ ಅವರನ್ನು ಕೊಲೆಗಡುಕ ಎಂದ ಸಿದ್ದರಾಮಯ್ಯ, ಈ ಸದನದಲ್ಲಿ ಇರಲು ಅರ್ಹವಲ್ಲ. ಆರ್‌ಎಸ್‌ಎಸ್ -ಸಂಘ ಪರಿವಾರದವರ ಹೆಸರು ಪ್ರಸ್ತಾಪಿಸುತ್ತಿರುವುದು ಅಕ್ಷಮ್ಯ ಎಂದು ಹೇಳಿದರು.
ಕರಾವಳಿ ಭಾಗದ ಬಿಜೆಪಿ ಶಾಸಕರು ಎದ್ದು ನಿಂತು, ಆರ್‌ಎಸ್‌ಎಸ್- ಸಂಘ ಪರಿವಾರ ಪ್ರಸ್ತಾಪವನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು. ಸಚಿವ ಸಿ.ಟಿ.ರವಿ, ಅಂಬೇಡ್ಕರ್‌ರಿಗೆ ಟಿಕೆಟ್ ಕೊಡದೆ ಅವರನ್ನು ಸೋಲಿಸಿದ ಕಾಂಗ್ರೆಸ್ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುತ್ತಿದೆ. ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದೆ ಎಂದು ಲೇವಡಿ ಮಾಡಿದರು.
ತುಕ್ಡೆ ತುಕ್ಡೆ ಗ್ಯಾಂಗ್ ಜತೆ ಫೋಟೋಗೆ ಪೋಸ್ ಕೊಟ್ಟವರು, ಅಮೂಲ್ಯಳನ್ನು ಮೊಮ್ಮಗಳು ಎಂದು ತಬ್ಬಿಕೊಂಡವರು ದೇಶಪ್ರೇಮಿಗಳಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರವಿಂದ ಲಿಂಬಾವಳಿ ಅವರು, ವೀರ ಸಾವರ್ಕರ್ ಅವರನ್ನು ಅವಹೇಳನ ಮಾಡಿದ ದೊರೆಸ್ವಾಮಿ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅಮೂಲ್ಯ ಶಾಸಕರಾದ ವಿಶ್ವನಾಥ್, ಸತೀಶ್‌ರೆಡ್ಡಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ.
ಸಹ ಶಾಸಕರಿಗೆ ಅಗೌರವ ತೋರಿದರೂ ನಿಮಗೆ (ಕಾಂಗ್ರೆಸ್) ನೋವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿ ಸಚಿವರು ಪ್ರತಿಪಕ್ಷ ಸದಸ್ಯರ ಮೇಲೆ ಮುಗಿಬಿದ್ದರು. ಇದೇ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲ ವಾತಾವರಣ ನಿರ್ಮಾಣವಾಗಿತ್ತು.