ಬೆಂಗಳೂರು: ಸಿದ್ದರಾಮಯ್ಯನವರೇ, ಕಾಂಗ್ರೆಸ್ ನಡಿಗೆ – ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದು ಭಾಷಣ ಬಿಗಿದಿರಿ. ಅಂದರೆ ಐದು ವರ್ಷದಲ್ಲಿ ಐವತ್ತು ಸಾವಿರ ಕೋಟಿ! ಆದರೆ ನೀವು ಕೊಟ್ಟಿದ್ದೆಷ್ಟು ಸಿದ್ದರಾಮಯ್ಯನವರೇ ಎಂದು ಬಿಜೆಪಿ ಪ್ರಶ್ನಿಸಿದೆ.
ಸಾಮಾಜಿಕ ಜಾಲತಾಣ ‘ಕೂ’ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕೃಷ್ಣಾ ಮೇಲ್ದಂಡೆಗೆ ವಾರ್ಷಿಕ ಹತ್ತು ಸಾವಿರ ಕೋಟಿ ಅನುದಾನ ಅಸಾಧ್ಯ ಎಂದು ಪತ್ರಿಕೆಗಳು ಅಂದೇ ಬರೆದಿದ್ದವು. ಆದರೆ ಕೂಡಲಸಂಗಮದ ಸತ್ಯತಾಣದಲ್ಲಿ ನಿಂತು ಭಾಷಣ ಮಾಡುವಾಗ ನೀವು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡಿರಿ. ಅನುದಾನ ನೀಡಲು ಸಾಧ್ಯವಿದೆ ಎಂದಿರಿ. ಆದರೆ, ಅಧಿಕಾರಕ್ಕೆ ಬಂದಾಗ ಕೃಷ್ಣೆಯನ್ನು ಮರೆತಿರಿ ಎಂದಿದೆ.
2013 ರಲ್ಲಿ ಮುಖ್ಯಮಂತ್ರಿಯಾದಾಗ, ತಾನು ಕೃಷ್ಣಾ ನದಿಯ ತಟದಲ್ಲಿ ನಿಂತು ಆಡಿದ ಮಾತುಗಳನ್ನು ಬುರುಡೆರಾಮಯ್ಯ ಸಂಪೂರ್ಣ ಮರೆತರು. “ವರ್ಷಕ್ಕೆ ಅಲ್ಲಪ್ಪ, ಅದು ಐದು ವರ್ಷಕ್ಕೆ ಹತ್ತು ಸಾವಿರ ಕೋಟಿ “ಎಂದಿದ್ದು ಎಂದು ವಿಷಯಾಂತರ ಮಾಡಿದರು. ದಾಖಲೆ ಮುಂದಿಟ್ಟಾಗ “ಮತಾಂತರ ಕಾಯ್ದೆ” ಸಂದರ್ಭದಲ್ಲಿ ಆದಂತೆ ಪೇಚಿಗೆ ಸಿಲುಕಿದ್ದು ಮರೆತು ಹೋಯ್ತೆ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ:ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆಯಿಲ್ಲ, ಬಂದ್ ಕೈಬಿಡಿ: ಸಚಿವ ಸುನಿಲ್ ಕುಮಾರ್
ಈಗ ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸುಳ್ಳಿನ ರಾಜಕಾರಣ ಆರಂಭಿಸಿದ್ದಾರೆ. ಮೇಕೆದಾಟು ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರ ಹಲವು ಬಾರಿ ಪ್ರತಿಪಾದಿಸಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳಿನ ಮೆರವಣಿಗೆ ಹೊರಟಿದ್ದಾರೆ. ಎಷ್ಟೆಂದರೂ ಸುಳ್ಳೇ ನಿಮ್ಮ ಮನೆ ದೇವರಲ್ಲವೇ ಎಂದು ಬಿಜೆಪಿ ವ್ಯಂಗ್ಯವಾಡಿದೆ.