Advertisement
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮತಾಂತರ ನಿಷೇಧ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ಇದೇ ಅಧಿವೇಶನದಲ್ಲೇ ಮಂಡಿಸಿ ರದ್ದುಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಒಟ್ಟು 17 ವಿಚಾರಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮೂರು ಮಹತ್ವದ ಸಂಗತಿಗಳ ಬಗ್ಗೆ ಆಯಾ ಇಲಾಖೆಯ ಸಚಿವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Related Articles
Advertisement
ಕಾಯ್ದೆಯಲ್ಲಿ ಏನಿತ್ತು?
ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಕೇಂದ್ರ ಸರಕಾರ 2017ರಲ್ಲಿ ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯ್ದೆಯನ್ನು ಜಾರಿಗೆ ತಂದು ಅದನ್ನು ಸುಗ್ರಿವಾಜ್ಞೆ ಮೂಲಕ ಅನುಷ್ಠಾನಕ್ಕೆ ತರುವಂತೆ ರಾಜ್ಯಕ್ಕೆ ಸಲಹೆ ನೀಡಿತ್ತು. ಕೇಂದ್ರದ ತಿದ್ದುಪಡಿ ಕಾಯ್ದೆಯನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರಕಾರ 2020ರಲ್ಲಿ ಕರ್ನಾಟಕದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಕಡೆಗೆ ರೈತರ ವಿರೋಧದಿಂದಾಗಿ ಕೇಂದ್ರ ಸರಕಾರ ಮೂರು ಕಾಯ್ದೆಗಳನ್ನು ಹಿಂಪಡೆದಿತ್ತಾದರೂ ರಾಜ್ಯ ವಾಪಸ್ ಪಡೆದಿರಲಿಲ್ಲ.
ಸಂವಿಧಾನದ ಓದು
ರಾಜ್ಯದ ಎಲ್ಲ ಶಾಲಾ -ಕಾಲೇಜುಗಳಲ್ಲಿ ಸಂವಿಧಾನದ ಪೂರ್ವಪೀಠಿಕೆಯನ್ನು ಬೆಳಗ್ಗೆ ಪ್ರಾರ್ಥನೆ ಬಳಿಕ ಓದುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಯುವಜನತೆ ಶಾಲೆ, ಕಾಲೇಜು, ವಿವಿಗಳಲ್ಲಿ ಕಡ್ಡಾಯವಾಗಿ ಸಂವಿಧಾನದ ಪೀಠಿಕೆ ಪ್ರತಿ ದಿನ ಓದುವುದು ಕಡ್ಡಾಯ. ಸರಕಾರಿ, ಖಾಸಗಿ ಎಲ್ಲ ಕಡೆ ಇದು ಅನ್ವಯವಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ.ಮಹದೇವಪ್ಪ ವಿವರಿಸಿದರು. ಇದೊಂದು ಐತಿಹಾಸಿಕ ತೀರ್ಮಾನ. ಪ್ರಾರ್ಥನೆ ಬಳಿಕ ಸಂವಿಧಾನದ ಪೂರ್ವ ಪೀಠಿಕೆ ಓದುವುದು ಕಡ್ಡಾಯ. ಸರಕಾರಿ, ಅರೆ ಸರಕಾರಿ ಕಚೇರಿಗಳಲ್ಲಿ ಪೀಠಿಕೆಯ ಫೋಟೋ ಹಾಕಬೇಕು ಎಂದೂ ಸೂಚನೆ ನೀಡಲಾಗುತ್ತದೆ ಎಂದು ವಿವರಿಸಿದರು.
ಸಾರಿಗೆ ನೌಕರರಿಗೆ ಶೇ.15ರ ವೇತನ ಖುಷಿ
ಈ ಹಿಂದೆ ಸರಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಕರೆ ನೀಡಿದ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರಕಾರವು ಸಾರಿಗೆ ನೌಕರರ ಮೂಲವೇತನವನ್ನು ಶೇ. 15ರಷ್ಟು ಹೆಚ್ಚಿಸಿ ಮಾರ್ಚ್‌ನಿಂದ ಪೂರ್ವಾನ್ವಯ ಆಗುವಂತೆ ಕಳೆದ ಮಾರ್ಚ್ 17ರಂದು ಆದೇಶ ಹೊರಡಿಸಿತ್ತು. ಮೊದಲಿಗೆ ಶೇ.14ರಷ್ಟು ಹೆಚ್ಚಳಕ್ಕೆ ಆಗಿನ ಸರಕಾರ ಒಪ್ಪಿಗೆ ನೀಡಿತ್ತು. ಇದಕ್ಕೆ ಸಾರಿಗೆ ನೌಕರರು ಒಪ್ಪದೆ, ಕನಿಷ್ಠ ಶೇ.20ರಷ್ಟು ಹೆಚ್ಚಿಸುವಂತೆ ಒತ್ತಾಯಿಸಿದ್ದರು. ಕಡೆಗೆ ಆಗಿನ ಸಿಎಂ ಬೊಮ್ಮಾಯಿ ಅವರು ಶೇ.15ರಷ್ಟು ಏರಿಕೆಗೆ ನಿರ್ಧರಿಸಿದ್ದರು.
ಅಂದು ಸರಕಾರಿ ಆದೇಶದ ಬಳಿಕವೂ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರು ಪಟ್ಟುಹಿಡಿದಿದ್ದರು. ಯಾಕೆಂದರೆ, ಅದೊಂದು “ಏಕಪಕ್ಷೀಯ ನಿರ್ಧಾರ’ವಾಗಿದೆ. ಯಾವುದೇ ನೌಕರರ ಸಂಘದೊಂದಿಗೆ ಚರ್ಚಿಸದೆ, ವಿಶ್ವಾಸಕ್ಕೂ ತೆಗೆದುಕೊಳ್ಳದೆ ಪರಿಷ್ಕರಿಸಲಾಗಿದೆ ಎಂದು ಸಾರಿಗೆ ನೌಕರರ ಸಂಘಟನೆಗಳು ಆರೋಪಿಸಿದ್ದವು. ಈಗ ನೂತನ ಸರಕಾರ ಇದೇ ಆದೇಶಕ್ಕೆ ಗುರುವಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಈ ಪರಿಷ್ಕರಣೆಯಿಂದ ಲಕ್ಷಕ್ಕೂ ಅಧಿಕ ನೌಕರರಿಗೆ ಅನುಕೂಲ ಆಗಲಿದೆ.
ಸಂಪುಟದ ಪ್ರಮುಖ ನಿರ್ಧಾರಗಳು
ಕರ್ನಾಟಕ ಹೈಕೋರ್ಟ್ ಆಡಳಿತ ವೆಚ್ಚ ಮಿತಿ, ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆ ಅಧಿಕಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅವಗಾಹನೆಗೆ ನೀಡಲು ಒಪ್ಪಿಗೆ.
ಕೆಪಿಎಸ್ಸಿಯಲ್ಲಿ ಖಾಲಿ ಇರುವ ಮೂರು ಸದಸ್ಯರ ಭರ್ತಿ ಅಧಿಕಾರವನ್ನು ಸಿಎಂ ಸಿದ್ದರಾಮಯ್ಯಗೆ ನೀಡಲು ನಿರ್ಧಾರ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ಬಯೋಟೆಕ್ನಾಲಜಿ, ವಿಜ್ಞಾನ, ತಂತ್ರಜ್ಞಾನ ಇಲಾಖೆ ನಡೆಸುವ ಬೆಂಗಳೂರು ಟೆಕ್ ಸಮಿಟ್ ಕಾರ್ಯಕ್ರಮ ನಡೆಸಲು ಇಸಿಎಂಎ ಸಂಸ್ಥೆಗೆ 17.98 ಕೋ. ರೂ.ಗೆ ಒಪ್ಪಿಗೆ ಹಾಗೂ 4ಜಿ ವಿನಾಯಿತಿ.
1,081 ಕೋ. ರೂ. ವೆಚ್ಚದಲ್ಲಿ 243 ಎಂಎಲ್‌ಡಿ ವೃಷಭಾವತಿ ನದಿ ನೀರನ್ನು ಶುದ್ಧೀಕರಿಸಿ 70 ಕೆರೆ ತುಂಬಿಸುವ ಪರಿಷ್ಕೃತ ಯೋಜನೆಗೆ ಒಪ್ಪಿಗೆ. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆಯ ಕೆರೆ ಭರ್ತಿಗೆ ಕ್ರಮ.
ಸಂಸದೀಯ ವ್ಯವಹಾರಗಳ ಇಲಾಖೆ ಅಡಿಯಲ್ಲಿನ ಡಿಸ್ ಕ್ವಾಲಿಫಿಕೇಶ್ ಆಕ್ಟ್ ತಿದ್ದುಪಡಿಗೆ ನಿರ್ಧಾರ. ಶಾಸಕರು ಕಾನೂನು ಸಲಹೆಗಾರರಾಗಿದ್ದರೆ ಅವರನ್ನು ಅನರ್ಹತೆ ವ್ಯಾಪ್ತಿಯಿಂದ ಹೊರಗಿಡಲು ನಿರ್ಧಾರ.
ವಿಪತ್ತು ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಂಪುಟ ಉಪ ಸಮಿತಿ ರಚಿಸಲು ಒಪ್ಪಿಗೆ.
ಸಾರಿಗೆ ನಿಗಮಗಳಲ್ಲಿ ಬಾಕಿಯಿದ್ದ ಮೋಟಾರು ವಾಹನ ತೆರಿಗೆ ಮತ್ತು ಹಿಂಬಾಕಿ ಮೊತ್ತ 79.85 ಕೋ. ರೂ. ವಿನಾಯಿತಿಗೆ ನಿರ್ಧಾರ.
ಸಾರಿಗೆ ನಿಗಮಕ್ಕೆ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಖರೀದಿ ಮಾಡುವುದಕ್ಕೆ 28 ಕೋಟಿ ರೂ. ಕೊಡಲು ಒಪ್ಪಿಗೆ.
ಗೃಹ ಲಕ್ಷ್ಮಿ ಯೋಜನೆಯ ಯಶಸ್ವಿ ಅನುಷ್ಠಾನವನ್ನು ಸಮಸ್ಯೆ ರಹಿತವಾಗಿ ಮಾಡಲು ತಂತ್ರಜ್ಞಾನ ಬಳಕೆಗೆ ತೀರ್ಮಾನ.
ಅಗ್ನಿಶಾಮಕ ದಳ ಕಾಯ್ದೆಗೆ ತಿದ್ದುಪಡಿ.