Advertisement

ಗುಜರಾತ್: ರೂಪಾನಿ ರಾಜೀನಾಮೆ ಹಿಂದೆ ಹೈಕಮಾಂಡ್ ಲೆಕ್ಕಾಚಾರವೇನು? ಮೋದಿ ಹೆಸರಲ್ಲಿ ಮತಯಾಚನೆ

05:44 PM Sep 11, 2021 | Team Udayavani |

ಗುಜರಾತ್ ವಿಧಾನಸಭಾ ಚುನಾವಣೆಗೆ 15 ತಿಂಗಳು ಬಾಕಿ ಇರುವಾಗಲೇ ವಿಜಯ್ ರೂಪಾನಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಶನಿವಾರ (ಸೆಪ್ಟೆಂಬರ್ 11) ದಿಢೀರ್ ಅಂತ ರಾಜೀನಾಮೆ ನೀಡಿದ್ದಾರೆ. ಏತನ್ಮಧ್ಯೆ ಗುಜರಾತ್ ನಲ್ಲಿನ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಕುರಿತು ವಿವಿಧ ಲೆಕ್ಕಾಚಾರದ ಊಹಾಪೋಹ ಹರಿದಾಡುತ್ತಿದೆ.

Advertisement

ಈಗಾಗಲೇ ಕರ್ನಾಟಕದಲ್ಲಿಯೂ ಮುಂಬರುವ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಕಳೆದ ಜುಲೈ ತಿಂಗಳಿನಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು. ನಂತರ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ಇದೀಗ ಗುಜರಾತ್ ನಲ್ಲಿಯೂ ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ.

ಭಾರತೀಯ ಜನತಾ ಪಕ್ಷದಲ್ಲಿ ಬದಲಾವಣೆ ಸಹಜ ಎಂದು ರೂಪಾನಿ ಅವರು ಅಭಿಪ್ರಾಯವ್ಯಕ್ತಪಡಿಸಿದ್ದು. ಮುಂಬರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮತ ಯಾಚಿಸುವುದಾಗಿ ತಿಳಿಸಿದ್ದಾರೆ.

ಇಂದು ರಾತ್ರಿ ಶಾಸಕಾಂಗ ಪಕ್ಷದ ಸಭೆ:

ಇಂದು ರಾತ್ರಿಯೇ ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಸಭೆಯಲ್ಲಿಯೇ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಎಲ್ಲಾ ಶಾಸಕರಿಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆಯಂತೆ. ಅಷ್ಟೇ ಅಲ್ಲ ಹಾಲಿ ಸಂಪುಟದಲ್ಲಿರುವ ಕೆಲವು ಸಚಿವರುಗಳಿಗೂ ಕೊಖ್ ನೀಡಿ, ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

Advertisement

ಬಹುಸಂಖ್ಯಾತ ಪಾಟೀದಾರ್ ಸಮುದಾಯದ ಮೇಲೆ ಬಿಜೆಪಿ ಕಣ್ಣು:

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷ 112 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ 65 ಸ್ಥಾನ, ಭಾರತೀಯ ಬುಡಕಟ್ಟು ಪಕ್ಷ 02, ಎಸ್ ಸಿಪಿ 01 ಹಾಗೂ ಪಕ್ಷೇತರ 01 ಸ್ಥಾನ ಇದೆ. ಮುಂಬರುವ ಚುನಾವಣೆಯನ್ನು ಎದುರಿಸಲು ಭಾರತೀಯ ಜನತಾ ಪಕ್ಷದ ಹೈಕಮಾಂಡ್ ರಣತಂತ್ರ ರೂಪಿಸುತ್ತಿದೆ. ಈಗಾಗಲೇ ಕರ್ನಾಟಕ, ಉತ್ತರಾಖಂಡ್ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾರೆ.

ರಾಜ್ಯದಲ್ಲಿರುವ ಪಾಟೀದಾರ್ ಸಮುದಾಯದ ಮೇಲೆ ಭಾರತೀಯ ಜನತಾ ಪಕ್ಷ ಒಂದು ಕಣ್ಣಿಟ್ಟಿದ್ದು, ಅದೇ ಸಮುದಯದ ವ್ಯಕ್ತಿಗೆ ಮುಖ್ಯಮಂತ್ರ ಹುದ್ದೆಗೆ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡುವ ಸಾಧ್ಯತೆ ಇದೆ.. ಸಿಎಂ ರೇಸ್ ನಲ್ಲಿ ಸದ್ಯದ ಮಾಹಿತಿ ಪ್ರಕಾರ, ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್, ಮಸ್ಸುಖ್ ಮಾಂಡವೀಯಾ ಹೆಸರು ಮುಂಚೂಣಿಯಲ್ಲಿದೆ. ಇಬ್ಬರೂ ಪಾಟೀದಾರ್ ಸಮುದಾಯಕ್ಕೆ ಸೇರಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೊಂದು ವರದಿಯ ಪ್ರಕಾರ, ಬಿಜೆಪಿಯ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೆಸರು ಕೂಡಾ ಮುಖ್ಯಮಂತ್ರಿ ಹುದ್ದೆಯ ಪಟ್ಟಿಯಲ್ಲಿದೆ ಎಂದು ತಿಳಿಸಿದೆ. ಮೂಲಗಳ ಪ್ರಕಾರ, ಮುಂದಿನ ಚುನಾವಣೆ ವಿಜಯ್ ರೂಪಾನಿ ಅವರ ನಾಯಕತ್ವದಲ್ಲಿ ನಡೆಯುವುದಿಲ್ಲ ಎನ್ನಲಾಗುತ್ತಿದೆ.

ಕಳೆದ ಬಾರಿಯ ಚುನಾವಣೆಯಲ್ಲಿಯೂ ಭಾರತೀಯ ಜನತಾ ಪಕ್ಷದ ಕೈ ಹಿಡಿದದ್ದು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ. ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ ಸುಮಾರು ಎರಡು ದಶಕಗಳ ಕಾಲ ಅಧಿಕಾರದ ಗದ್ದುಗೆಯಲ್ಲಿದ್ದರೂ ಕೂಡಾ ವಿಜಯ್ ರೂಪಾನಿ ಹೆಚ್ಚು ಜನಪ್ರಿಯತೆ ಗಳಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಹಾಲಿ ಶಾಸಕರಿಗೂ ಕೂಡಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಲಿದೆ ಎಂದು ಮೂಲಗಳು ಹೇಳಿವೆ.

ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷದ ಸ್ಥಿತಿಗತಿ ಕುರಿತು ಬಿಜೆಪಿ ಹಿರಿಯ ಮುಖಂಡ, ಗುಜರಾತ್ ನ ಉಸ್ತುವಾರಿ ಹೊಣೆ ಹೊತ್ತಿರುವ ಭೂಪೇಂದ್ರ ಯಾದವ್ ಹಾಗೂ ಪಕ್ಷದ ಪ್ರಧಾನ (ಸಂಘಟನಾ) ಕಾರ್ಯದರ್ಶಿ ಬಿಎಲ್ ಸಂತೋಷ್ ವಿಶ್ಲೇಷಿಸುತ್ತಿದ್ದಾರೆನ್ನಲಾಗಿದೆ. ರಾಜ್ಯದಲ್ಲಿ ಪಾಟಿದಾರ್ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು, ರೂಪಾನಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದು ಹೈಕಮಾಂಡ್ ಗೆ ಒಲವಿಲ್ಲ. ಗುಜರಾತ್ ನಗರ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿಲ್ಲ ಎಂಬ ಆರೋಪ ರೂಪಾನಿ ಅವರ ಮೇಲಿದೆ. ಪ್ರಧಾನಿ ಮೋದಿ ಅವರ ಆಪ್ತ ವಲಯದಲ್ಲಿರುವ ಸಿಆರ್ ಪಾಟೀಲ್ ಅವರನ್ನು ಕಳೆದ ವರ್ಷ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಹೊಸ ನಾಯಕತ್ವದ ಮೂಲಕ ಮುಂಬರುವ 15 ತಿಂಗಳ ಕಾಲದಲ್ಲಿ ಚುನಾವಣೆಯನ್ನು ಎದುರಿಸುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ ನದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next