Advertisement

ಭ್ರಷ್ಟಾಚಾರ: 3 ದಿನಕ್ಕೊಮ್ಮೆ ಸರಕಾರದ ವಿರುದ್ಧ  ಬಿಜೆಪಿ ದಾಳಿ

08:50 AM Oct 06, 2017 | Karthik A |

ಬೆಂಗಳೂರು: ರಾಜ್ಯ ಸರಕಾರದ ಭ್ರಷ್ಟಾಚಾರಗಳ ಕುರಿತು ಆರೋಪಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದ ಬಿಜೆಪಿ, ಸಕಾಲಕ್ಕೆ ಆರೋಪ ಪಟ್ಟಿ ಬಿಡುಗಡೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಸರಕಾರದ ಹಗರಣಗಳ ಕುರಿತು ಪಕ್ಷದ ಮುಖಂಡರಿಂದ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳ ಕುರಿತು ಸೆ. 26ರಂದು ಆರೋಪಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದರು. ಆದರೆ, ಇಲಾಖಾ ಅಧಿಕಾರಿಗಳು ಪ್ರಾಮಾಣೀಕರಿಸಿದ ದಾಖಲೆಗಳು ಲಭ್ಯವಾಗದ ಕಾರಣ ಇದುವರೆಗೂ ಆರೋಪ ಪಟ್ಟಿ ಬಿಡುಗಡೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಒಂದು ಹಗರಣವನ್ನು ಪತ್ರಿಕಾಗೋಷ್ಠಿ ಮೂಲಕ ಬಹಿರಂಗಪಡಿಸಲು ತೀರ್ಮಾನಿಸಲಾಗಿದೆ.

Advertisement

ಬಿ.ಎಸ್‌. ಯಡಿಯೂರಪ್ಪ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಬುಧವಾರ ಸಂಸದೆ ಶೋಭಾ ಕರಂದ್ಲಾಜೆ ಅವರು ಸರಕಾರದ ಕೆಲವು ಹಗರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ವಾರ ವಿಧಾನ ಪರಿಷತ್‌ ಸದಸ್ಯ ಬಿ.ಜೆ. ಪುಟ್ಟಸ್ವಾಮಿ ಅವರು ಮತ್ತೂಂದು ಹಗರಣ ಬಯಲಿಗೆಳೆಯಲಿದ್ದಾರೆ. ಇನ್ನು ಮುಂದೆ ಪ್ರತಿ ಮೂರು ದಿನಕ್ಕೊಮ್ಮೆ ಸರಕಾರದ ಒಂದೊಂದೇ ಹಗರಣಗಳನ್ನು ಬಯಲಿಗೆಳೆಯಲಾಗುವುದು ಎಂದು ಹೇಳಿದರು.

ಸಾಲ ಮನ್ನಾ ಆದರೂ ರೈತರಿಗೆ ಹಣ ಸಿಕ್ಕಿಲ್ಲ
ರಾಜ್ಯ ಸರಕಾರ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ ಸಾಲದ ಪೈಕಿ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿ 100 ದಿನ ಕಳೆದಿದೆ. ಆದರೆ, ಇದುವರೆಗೂ ರೈತರಿಗೆ ಅದರ ಲಾಭ ಸಿಕ್ಕಿಲ್ಲ. ಸಾಲ ಮನ್ನಾ ಹಣ ರೈತರಿಗೆ ಬಿಡುಗಡೆಯಾಗಿಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದಾರೆ. ಇದರಿಂದ ಒಂದೆಡೆ ಹೊಸ ಸಾಲ ಸಿಗದೆ ರೈತರು ಕಂಗಾಲಾಗುವುದರ ಜತೆಗೆ ಸಹಕಾರ ಸಂಘಗಳೂ ಬೀದಿಗೆ ಬರುವಂತಾಗಿದೆ. ಆದ್ದರಿಂದ ಮುಖ್ಯಮಂತ್ರಿ ಅವರು ಸಾಲಮನ್ನಾ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next