ಬೆಂಗಳೂರು: ಮಾರ್ಚ್ ಮೊದಲ ವಾರ ಆರಂಭ ಆಗಲಿರುವ ಬಿಜೆಪಿ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ಚಾಲನೆ ನೀಡಲಿದ್ದಾರೆ.
ಬುಧವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ.
ಮಾ. 1ರಂದು ಮಲೆ ಮಹ ದೇಶ್ವರ ಬೆಟ್ಟದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾ. 2ರಂದು ಬೆಳಗಾವಿ ಜಿಲ್ಲೆಯ ನಂದಗಢದಲ್ಲಿ ರಾಜನಾಥ್ ಸಿಂಗ್ ಹಾಗೂ ಮಾ. 3ರಂದು ಬೆಂಗಳೂರು ಮತ್ತು ಬಸವ ಕಲ್ಯಾಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಯಾತ್ರೆ ವೇಳೆ ಆಯಾ ಪ್ರದೇಶದ ಸಾಂಸ್ಕೃತಿಕ, ಕ್ರೀಡೆ ಸಹಿತ ವಿವಿಧ ವಲಯಗಳ ಸಾಧಕರು ಮತ್ತು ಗಣ್ಯರನ್ನು ಭೇಟಿ ಮಾಡಲಾಗುತ್ತದೆ. ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಯಾತ್ರೆ ಮತ್ತು ಸಮಾವೇಶಗಳ ರೂಪುರೇಷೆಗಳ ವಿವರಣೆ ನೀಡಿದ್ದಾರೆ.
ಬುಧವಾರ ಬೆಳಗ್ಗೆಯಷ್ಟೇ ಉಸ್ತುವಾರಿಗಳ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮಾ. 1 ರಂದು ಬಿಜೆಪಿ ರಥಯಾತ್ರೆ ಆರಂಭವಾಗುವ ಬಗ್ಗೆ ಮಾಹಿತಿ ನೀಡಿದ್ದರು.