Advertisement

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

05:34 PM Sep 21, 2024 | Vishnudas Patil |

ವಿಜಯಪುರ: ”ಸಿಡಿ ಬಿಡುಗಡೆಯಿಂದ ರಮೇಶ ಜಾರಕಿಹೊಳಿ ಅವರಿಗೆ ದೊಡ್ಡ ಅಪಮಾನವಾಗಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇದ್ದಾರೆ ಎಂಬ ಸಿಟ್ಟು ರಮೇಶ ಜಾರಕಿಹೊಳಿ ಅವರಿಗಿದೆ. ಅವರ ಸಿಟ್ಟು ಕಡಿಮೆಯಾಗಿಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ” ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಶನಿವಾರ(ಸೆ21) ಹೇಳಿಕೆ ನೀಡಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಿಜಯೇಂದ್ರವರನ್ನು ರಾಜಾಧ್ಯಕ್ಷರನ್ನಾಗಿ ನಾನು ಒಪ್ಪುವುದಿಲ್ಲ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ”ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಂಧಾನವಾಗಿಲ್ಲ. ಅಲ್ಲಿ ನಮ್ಮ ಭಾವನೆಗಳನ್ನು ಹೇಳಿದ್ದೇವೆ. ಈ ಹಿಂದೆ ರಮೇಶ್ ಜಾರಕಿಹೊಳಿ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ಅವರಿಂದ ಅತ್ಯಾಚಾರವಾಗಿದೆ ಎಂದು ಸಾಬೀತು ಮಾಡಲು ಹೋದರು. ಆದರೆ, ಮಹಿಳೆ ಅದು ಸಮ್ಮತಿಯಿಂದಲೇ ಆಗಿದ್ದು ಎಂದು ಹೇಳಿಕೆ ಕೊಟ್ಟಿದ್ದಾಳೆ. ಆದರೆ, ಈ ಘಟನೆಯಿಂದ ರಮೇಶ್ ಜಾರಕಿಹೋಳಿ ಅವರಿಗೆ ಬಹಳ ದೊಡ್ಡ ಅಪಮಾನವಾಗಿದೆ. ಅವರ ಸಿಟ್ಟು ಕಡಿಮೆಯಾಗಿಲ್ಲ” ಎಂದರು.

”ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಕುರ್ಚಿಯ ಕಾಲುಗಳು ಅಲ್ಲಾಡುತ್ತಿವೆ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಯತ್ನಾಳ, ವಿಜಯೇಂದ್ರ ಜತೆ ನಮ್ಮ ಎಂ.ಬಿ.ಪಾಟೀಲರು ಆತ್ಮೀಯರಿದ್ದಾರೆ. ಅವರವರು ಮಾತನಾಡುತ್ತಿರಬಹುದು. ಯಾಕೆಂದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಅಲಯನ್ಸ್ ಪಾರ್ಟಿಗಳಿವೆ. ಎಂ.ಬಿ.ಪಾಟೀಲರದ್ದು ವಿಜಯೇಂದ್ರ ಹಾಗೂ ಯಡಿಯೂರಪ್ಪ ಜತೆ ಸ್ವಲ್ಪ ದೋಸ್ತಿ ಇದೆ” ಎಂದರು.

ಮುನಿರತ್ನ ಆಡಿಯೋ ಸಾಬೀತಾದರೆ, ಕಾನೂನಡಿ ಕ್ರಮವಾಗಲಿ
ಇದೇ ವೇಳೆ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳು ಆಘಾತಕಾರಿ. ಅವರ ಆಡಿಯೋ ಬಗ್ಗೆ ತನಿಖೆಯಾಗಲಿ. ಸತ್ಯಾಸತ್ಯತೆ ಹೊರಬರಬೇಕು. ಅದು ಮುನಿರತ್ನ ಅವರದ್ದೇ ಧ್ವನಿ ಎಂಬುದು ಸಾಬೀತಾದರೆ, ಸರ್ಕಾರ ನಿರ್ಭಿಡೆಯಿಂದ ಕ್ರಮ ತೆಗೆದುಕೊಳ್ಳಲಿ. ನಾವು ಇಂತಹ ಹೇಯ ಕೆಲಸವನ್ನು ಒಪ್ಪಲ್ಲ ಎಂದು ತಿಳಿಸಿದರು.

ಒಬ್ಬ ಜನಪ್ರತಿನಿಧಿ ತನಗೆ ಮತ ಯಾರು ಹಾಕಿದ್ದಾರೋ, ಅವರ ಸಮುದಾಯದ ಬಗ್ಗೆ ಅಪಮಾನ ಮಾಡುವುದು ಸರಿಯಲ್ಲ. ಒಕ್ಕಲಿಗರು, ದಲಿತರ ಹಾಗೂ ಯಾವುದೇ ಜನಾಂಗದ ವಿರುದ್ಧ ಮಾತನಾಡುವುದು ತಪ್ಪು. ಆದರೆ, ಆ ಧ್ವನಿ ಮುನಿರತ್ನ ಅವರದ್ದೇ ಹೌದಾ ಅಥವಾ ಇಲ್ಲ ಎಂಬುದು ಪರೀಕ್ಷೆಯಿಂದ ತಿಳಿಯಬೇಕು. ಈ ವಿಚಾರದಲ್ಲಿ ಗೃಹ ಸಚಿವರು ಎಫ್‌ಎಸ್‌ಎಲ್ ವರದಿ ಕೇಳಿದ್ದಾರೆ. ಇದು ಸಾಬೀತಾದರೆ ತನಿಖೆಗೆ ನಾವು ಸಹಕಾರ ಕೊಡುತ್ತೇವೆ ಎಂದರು.

Advertisement

ಈ ಹಿಂದೆ ವಿಧಾನಸೌಧದಲ್ಲಿ ಪಾಕಿಸ್ಥಾನ ಪರ ಘೋಷಣೆ ಕೂಗಿಲ್ಲ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ, ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ನಂತರ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜ ಎಂಬುದು ರುಜುವಾಯಿತು. ಇದೇ ರೀತಿಯಾಗಿ ಆ ಧ್ವನಿ ಮುನಿರತ್ನರದ್ದು ಎನ್ನಲು ಸಾಕ್ಷಿ ಸಿಕ್ಕರೆ. ಕಾನೂನು ಪ್ರಕಾರ ಶಿಕ್ಷೆ ನೀಡಬೇಕು. ಅದಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

ಅಲ್ಲದೇ, ಏಡ್ಸ್ ಪೀಡಿತ ಮಹಿಳೆಯರನ್ನು ಹನಿ ಟ್ರ‍್ಯಾಪ್‌ಗೆ ಬಳಕೆ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಬಹಳ ಅಕ್ಷಮ್ಯ ಅಪರಾಧ. ಇದಕ್ಕೆ ನಮ್ಮ ಸಿಂಪತಿ ಹಾಗೂ ಬೆಂಬಲ ಇಲ್ಲ. ಇದೆಲ್ಲವೂ ತಪ್ಪೇ. ಆದರೆ, ಅದು ಸಾಬೀತಾಗಬೇಕು. ಮುನಿರತ್ನ ಆ ರೀತಿ ಮಾಡಿದ್ದರೆ ನೂರಕ್ಕೆ ನೂರರಷ್ಟು ತಪ್ಪು. ಅಂತವರಿಗೆ ಕಾನೂನಿನಲ್ಲಿ ಏನು ಅವಕಾಶವಿದೆ, ಆ ಎಲ್ಲ ಶಿಕ್ಷೆ ಆಗಲಿ. ಒಂದು ವೇಳೆ ಇದರ ಹಿಂದೆ ಮಹಾನಾಯಕರು ಇದ್ದರೆ, ಅವರಿಗೂ ಶಿಕ್ಷೆಯಾಗಲಿ ಎಂದೂ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next